ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಆಡಳಿತ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುತ್ತೂರು ಮಠದಲ್ಲಿ ಹೇಳಿದರು.
ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಶ್ರೀಗಳ ಆಶೀರ್ವಾದ ಪಡೆದ ಬಿಎಸ್ವೈ ಮಠದಲ್ಲೇ ಉಪಹಾರ ಸವಿದರು. ಆನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಇಡೀ ಜಗತ್ತೇ ಅಚ್ಚರಿ ಪಡುವ ರೀತಿ ದೇಶವನ್ನು ಮುನ್ನಡೆಸುತ್ತಿದ್ದಾರೆ.
ಅವರು ಮತ್ತೊಂದು ಅವಧಿಗೆ ಪ್ರಧಾನಿಯಾಗಬೇಕೆಂಬುದು ನಮ್ಮ ಅಪೇಕ್ಷೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎನ್ನುವುದು ನನ್ನ ಹಾಗೂ ರಾಜ್ಯದ ಜನರ ಅಭಿಪ್ರಾಯ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡುತ್ತಾರೆ ಎಂದರು.
ಯಾವುದೇ ಕಾರಣಕ್ಕೂ ದೇವಾಲಯ ತೆರವು ಮಾಡುವುದು ಸರಿಯಲ್ಲ. ಈಗಾಗಲೇ ಮುಖ್ಯಮಂತ್ರಿಗಳು ತೆರವು ಮಾಡದಂತೆ ಸೂಚನೆ ನೀಡಿದ್ದಾರೆ. ದೇವಾಲಯ ಧ್ವಂಸ ಮಾಡದಂತೆ ನಾನೂ ಸಹ ಆಗ್ರಹ ಮಾಡುತ್ತೇನೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ:
ಸದ್ಯಕ್ಕೆ ವಿಜಯೇಂದ್ರ ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಅವರು ಉಪಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು. ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ರಾಜ್ಯ ಪ್ರವಾಸ ಮಾಡುತ್ತೇವೆ. ಅಧಿವೇಶನ ಮುಗಿದ 15 ದಿನಗಳ ನಂತರ ಈ ಬಗ್ಗೆ ರೂಪುರೇಷೆಗಳನ್ನು ಸಿದ್ಧ ಮಾಡಲಾಗುವುದು ಎಂದರು.
ಮಠದಲ್ಲಿ ಕಾಣಿಸಿಕೊಂಡ ನಂಜನಗೂಡು ತಹಶೀಲ್ದಾರ್:
ಹುಚ್ಚಗಣಿ ಶಕ್ತಿ ದೇವತೆ ಮಹದೇವಮ್ಮ ದೇವಸ್ಥಾನ ನೆಲಸಮ ಮಾಡಿ ವಿವಾದಕ್ಕೆ ಕಾರಣವಾಗಿದ್ದ ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ ಅವರು ಸುತ್ತೂರು ಮಠದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಸುತ್ತೂರು ಶ್ರೀಗಳನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.