ಮೈಸೂರು: ''ಬಿಜೆಪಿ ಆರೋಪ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತವಾಗಿದ್ದು, ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಇಂದು (ಸೋಮವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಮನೆಯಲ್ಲಿ ಹಣ ಪತ್ತೆಯಾಗಿರುವ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ದುಡ್ಡು ವಸೂಲಿ ಮಾಡುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಉತ್ತರಿಸಿದ ಸಿಎ, ''ಆದಾಯ ತೆರಿಗೆ ಇಲಾಖೆ ತನ್ನ ಕೆಲಸ ಮಾಡಿದೆ. ಯಾರದೋ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಇದಕ್ಕೆ ರಾಜಕೀಯ ನಂಟು ಕಲ್ಪಿಸುವುದು ಸರಿಯಲ್ಲ. ಬಿಜೆಪಿಯವರು ಯಾವುದೇ ಪ್ರತಿಭಟನೆ ಕೈಗೊಂಡರೂ ಜನ ಅವರನ್ನು ನಂಬುವುದಿಲ್ಲ. ಲೋಕಸಭೆ ಚುನಾವಣೆ ಹಾಗೂ ರಾಜಕೀಯ ಉದ್ದೇಶದಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ತನಿಖೆಯ ಅವಶ್ಯಕತೆಯಿಲ್ಲ. ಪಂಚ ರಾಜ್ಯಗಳ ಚುನಾವಣೆಯ ಇರುವುದರಿಂದ ಕಾಂಗ್ರೆಸ್‍ನ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಚುನಾವಣೆ ನಡೆಯುವುದಕ್ಕೂ ನಮ್ಮ ರಾಜ್ಯಕ್ಕೂ ಯಾವುದೇ ಸಂಬಂಧವಿಲ್ಲ'' ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಗೆ ದುಡ್ಡು ಸಂಗ್ರಹಿಸುವ ಗುರಿ ನೀಡಿರುವುದಾಗಿ ಬಿಜೆಪಿಯ ಸಿ.ಟಿ. ರವಿ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ''ಸಿ.ಟಿ. ರವಿಯವರ ಹೇಳಿಕೆಗಳು ಸದಾ ಸುಳ್ಳಿನಿಂದ ಕೂಡಿರುತ್ತದೆ. ಅವರ ಸುಳ್ಳು ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಈ ರೀತಿಯ ಎಲ್ಲ ಆರೋಪಗಳು ಸುಳ್ಳು ಮತ್ತು ಆಧಾರ ರಹಿತವಾಗಿದೆ'' ಎಂದರು.
ರೈತರಿಗೆ 5 ಗಂಟೆ ವಿದ್ಯುತ್ ಸರಬರಾಜು: ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಹೊರತುಪಡಿಸಿದರೆ, ನಂತರದ ಬಿಜೆಪಿ ಅಥವಾ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಒಂದು ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಮಳೆ ಅಭಾವದಿಂದಾಗಿ ಪಂಪ್ ಸೆಟ್ಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ಸಾಧಾರಣವಾಗಿ, ಅಕ್ಟೋಬರ್ ತಿಂಗಳವರೆಗೆ 10,000 ಮೆ.ವ್ಯಾ ವಿದ್ಯುತ್ ಖರ್ಚಾಗುತ್ತಿತ್ತು. ಆದರೆ, ಈ ಬಾರಿ 16,000 ಮೆ.ವ್ಯಾಟ್ ಖರ್ಚಾಗುತ್ತಿದೆ. ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಆದ್ದರಿಂದ ವಿದ್ಯುತ್ ಸಮಸ್ಯೆ ಎದುರಾಗಿರುವುದು ನಿಜ. ಈ ಕುರಿತು ಸಭೆ ನಡೆಸಿ, ರೈತರಿಗೆ ಮೂರು ಫೇಸ್ಗಳಲ್ಲಿ 5 ಗಂಟೆಗಳ ಕಾಲ ಸತತ ವಿದ್ಯುತ್ ನೀಡಬೇಕು. ಹೊರಗಿನಿಂದ ವಿದ್ಯುತ್ ಖರೀದಿಸಲು ಸೂಚನೆ ನೀಡಲಾಗಿದೆ. ಕಬ್ಬು ಅರೆಯುವಿಕೆಯಿಂದ ವಿದ್ಯುತ್ ಕೋ ಜನರೇಷನ್ನತ್ತ ಕೂಡ ಗಮನ ಹರಿಸಲು ಸೂಚಿಸಲಾಗಿದೆ. ಲೋಡ್ ಶೆಡ್ಡಿಂಗ್ನಿಂದ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದು ಸಿಎಂ ವಿವರಿಸಿದರು.
ನೀರು, ಮೇವು ಪೂರೈಕೆಗೆ ತೊಂದರೆಯಾಗದಂತೆ ಕ್ರಮ: ಜಾನುವಾರುಗಳಿಗೆ ಮೇವಿನ ಕೊರತೆ ಆಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಿಎಂ, ''ಪ್ರಸ್ತುತ ಮೇವಿನ ಕೊರತೆಯಿಲ್ಲ. ಆದರೂ ಮೇವು ಬೆಳೆಸಲು ಹಾಗೂ ಶೇಖರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. 236 ತಾಲೂಕುಗಳಲ್ಲಿ 216 ತಾಲೂಕುಗಳು ಬರಪೀಡಿತವಾಗಿವೆ. ವಾಸ್ತವವಾಗಿ 42 ಸಾವಿರ ಹೆಕ್ಟೇರ್ನಲ್ಲಿ ಬೆಳೆ ಹಾನಿಯಾಗಿದ್ದು, 30 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಕೇಂದ್ರದ ಮಾರ್ಗಸೂಚಿಯಂತೆ 4,860 ಕೋಟಿ ರೂ. ಪರಿಹಾರ ಮೊತ್ತಕ್ಕೆ ಮನವಿ ಮಾಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ, ಖಾಸಗಿ ಕೊಳವೆಬಾವಿಗಳನ್ನು ಬಳಸಬೇಕು. ಅಗತ್ಯವಿದ್ದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯಲು ಸಹ ತಿಳಿಸಲಾಗಿದೆ. ಒಟ್ಟಾರೆ ಜನರ ಕೈಗೆ ಕೆಲಸ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹಂಸಲೇಖ ಅವರು ದಸರಾ ಉದ್ಘಾಟನೆ ಸಂದರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರವಾಗಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ, ''ಈ ಬಗ್ಗೆ ನಿನ್ನೆಯ ದಿನ ಅವರು ತಮ್ಮ ದಸರಾ ಭಾಷಣದಲ್ಲಿಯೂ ಪ್ರಸ್ತಾಪಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು'' ಎಂದರು.
ಇದನ್ನೂ ಓದಿ: 'ಯಾವುದೇ ಬಣ ಗಿಣ ಇಲ್ಲ': ದಸರಾ ಪ್ರವಾಸದಿಂದ ಹಿಂದೆ ಸರಿದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ