ಮೈಸೂರು: ನಗರದ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡುವುದಕ್ಕೆ, ಮತ್ತೆ ಗುದ್ದಾಟ ಶುರುವಾಗಿದೆ. 2015 ಅಕ್ಟೋಬರ್ 9 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಸರು ಬದಲಾವಣೆಗೆ ಪತ್ರ ಬರೆಯಲಾಗಿತ್ತು ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಅವರು ಹೇಳಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಹೆಸರು ಬದಲಾಣೆ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆಗಿನ ಸರ್ಕಾರಕ್ಕೆ ಬರೆದ ಪತ್ರದ ದಾಖಲೆ ಬಿಡುಗಡೆ ಮಾಡಿದರು. ಅಷ್ಟೇ ಬಿಜೆಪಿ ವಿರುದ್ಧ ಹರಿಹಾಯ್ದರು. ಜನರ ಸೆಳೆಯುವ ಸಲುವಾಗಿ ಸುಳ್ಳುಗಳನ್ನ ಹೇಳುವ ಕೆಲಸ ಬಿಜೆಪಿಯದ್ದಾಗಿದೆ ಎಂದು ಕಿಡಿಕಾರಿದರು. ಸ್ಥಳೀಯ ಬಿಜೆಪಿ ನಾಯಕರು ಎಲ್ಲವನ್ನು ನಾವೇ ಮಾಡಿದ್ದು ಎಂದು ಹೇಳುವುದು ಸರಿಯಲ್ಲ. ನಿಜವಾಗಿಯೂ ನಾಲ್ವಡಿಯವರ ಹೆಸರು ಬರಬೇಕೆಂದು ಬಯಸಿದ್ದು ಸಿದ್ದರಾಮಯ್ಯ ಎಂದು ಸ್ಪಷ್ಟ ಪಡಿಸಿದರು.
ಪ್ರತಾಪಸಿಂಹ ಟಾಂಗ್: ಈ ವಿಚಾರದ ಬಗ್ಗೆ ಸಂಸದ ಪ್ರತಾಪಸಿಂಹ ಮಾತನಾಡಿ, ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿಸಿದ್ದು ನಾನೇ. ನಾನು ನಿರಂತರ ಪರಿಶ್ರಮ ಪಟ್ಟ ಪರಿಣಾಮ ಹೆಸರು ಬದಲಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಮೈಸೂರು ವಿಮಾನ ನಿಲ್ದಾಣದ ಹೆಸರು ಬದಲಾವಣೆಗೆ ಸಿದ್ದರಾಮಯ್ಯ ಪ್ರಯತ್ನವನ್ನೇ ಮಾಡಿಲ್ಲ. ಅವರ ಕೈಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಡಿಯುವ ನೀರು ತರಲಿಕ್ಕಾಗಲಿಲ್ಲ. ಇನ್ನು ಹೆಸರು ಬದಲಾವಣೆ ಮಾಡಿಸುವ ಕೆಲಸ ಮಾಡುತ್ತಾರಾ? ಈಗ ಬಂದ್ಬಿಟ್ಟು ಪತ್ರ ಬರೆದಿದ್ರು ಅಂತಾರೆ. ಸಿದ್ದರಾಮಯ್ಯ ಆಗಿದ್ದರೆ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುತ್ತಿದ್ದರು. ನಾವಾಗಿರುವುದಕ್ಕೆ ನಾಲ್ವಡಿಯವರ ಹೆಸರಿಟ್ಟಿದ್ದೇವೆ ಎಂದು ಇದೇ ವೇಳೆ ಸಂಸದರು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಕಸದ ವಾಹನಗಳ ಮೇಲೆ 'ಬಿಬಿಎಂಪಿ' ನಾಮಫಲಕ ನಿಷೇಧ...!!