ಮಂಡ್ಯ: ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ನಾಳೆ ಬಿಜೆಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಆದ್ರೆ ಬಿಜೆಪಿಯ ಹೋರಾಟಕ್ಕೆ ಬೆಂಬಲ ಇಲ್ಲ ಎಂದು ರಾಜ್ಯ ರೈತ ಸಂಘ ತಿಳಿಸಿದೆ. ಖುದ್ದು ರೈತ ಮುಖಂಡರನ್ನ ತಮ್ಮ ಮಂಡ್ಯ ನಿವಾಸಕ್ಕೆ ಕರೆಸಿಕೊಂಡು ಸಂಸದೆ ಸುಮಾಲತಾ ಬೆಂಬಲ ಕೋರಿದ್ದರು. ಆದರೆ ಸಂಸದೆ ಸುಮಲತಾ ಮನವಿಯನ್ನು ರೈತ ಸಂಘ ತಿರಸ್ಕರಿಸಿದೆ.
ತಮಿಳುನಾಡಿಗೆ ಕಾವೇರಿ ನೀರಿ ಹರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ನಡೆಸಲಿರುವ ಪ್ರತಿಭಟನೆಗೆ ಬೆಂಬಲ ನೀಡುತ್ತೀರಾ ಎಂದು ಮಾಧ್ಯದವರು ಕೇಳಿಸದ ಪ್ರಶ್ನೆ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಪ್ರತಿಕ್ರಿಯಿಸಿ, "ನಮ್ಮ ಸಂಘಟನೆ ಜೊತೆ ಕುಳಿತು ಈ ಬಗ್ಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದಕ್ಕೆ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತಿದ್ದೇವೆ. ಅವರು ಪ್ರತಿಭಟಿಸುತ್ತಿರುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಅವರ ಪ್ರತಿಭಟನೆಗೆ ನಾವು ಬೆಂಬಲ ನೀಡುವುದಿಲ್ಲ. ಪಕ್ಷಾತೀತವಾಗಿ ನಾವು ನಿರಂತರವಾಗಿ ಹೋರಾಟ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ: ಮತ್ತೊಂದೆಡೆ, ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಸ್ಥಗಿತ ಮಾಡುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಆರ್ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿತ ಕಾಣುತ್ತಿದೆ. ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಯಾವುದೇ ಹೊಸ ಬೆಳೆ ಹಾಕಬೇಡಿ ಎಂದು ಇಲ್ಲಿನ ರೈತರಿಗೆ ತಿಳಿಸಿ, ನೆರೆ ರಾಜ್ಯದ ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಈಗಾಗಲೇ ಬಿತ್ತನೆ, ನಾಟಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಯಾವುದಕ್ಕೂ ಅವಕಾಶ ಆಗಿಲ್ಲ, ರೈತ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಕಾಣ ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಮಳೆ ಕೊರತೆ ಮತ್ತು ನೀರಿಲ್ಲದೆ ಬೆಳೆ ಹಾಕಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಬರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕಾವೇರಿ ನೀರಿನ ವಿಚಾರದಲ್ಲಿ ಎರಡೂ ರಾಜ್ಯಗಳು ಸಂಕಷ್ಟದ ಸೂತ್ರ ಹಂಚಿಕೊಳ್ಳಲಿ: ಸಚಿವ ಹೆಚ್ ಸಿ ಮಹಾದೇವಪ್ಪ