ಮಂಡ್ಯ: ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದೇವೆ ಎಂದು ಹೇಳಿಸುವ ಪ್ರಯತ್ನವನ್ನು ಸರ್ಕಾರ ಮಾಡ್ತಿದೆ. ಇದು ಸಾರ್ವಜನಿಕರಿಗೆ ಮಾಡುತ್ತಿರುವ ದ್ರೋಹ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ನಮ್ಮದು. ಲಸಿಕೆ ರಫ್ತು ಮಾಡುವ ಮೊದಲು ಇಲ್ಲಿನ ಪರಿಸ್ಥಿತಿ ಅರಿತುಕೊಳ್ಳಬೇಕಿತ್ತು. ರಾಜ್ಯಕ್ಕೆ ಎಷ್ಟು ವ್ಯಾಕ್ಸಿನ್ ಬೇಕು ಅದನ್ನು ಬುಕ್ ಮಾಡುವ ಕೆಲಸವಾಗಬೇಕಿತ್ತು. ಈ ನಿಟ್ಟಿನಲ್ಲಿ ಏನೂ ಮಾಡದೇ ಈಗ ನೇಣು ಹಾಕಿಕೊಳ್ಳಬೇಕಾ? ಎಂದು ಸರ್ಕಾರ ಪ್ರಶ್ನೆ ಮಾಡುತ್ತಿದೆ. ಹಾಗಾದರೆ ಇನ್ಯಾರು ಈ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಸರ್ಕಾರ ಜನರ ಕೈಬಿಟ್ಟಿದೆ. ನಿಮ್ಮ ಜೀವ ಉಳಿಸಿಕೊಳ್ಳುವುದು ನಿಮ್ಮ ಕೈಯ್ಯಲ್ಲಿದೆ. ದಯಮಾಡಿ ಮನೆಯೊಳಗಿರಿ, ನಿಮ್ಮ ಮಕ್ಕಳನ್ನು ಜೋಪಾನ ಮಾಡಿ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಮಾತನಾಡುತ್ತಿದ್ದಾರೆ. ಆದ್ರೆ 18 ವರ್ಷ ಕೆಳಗಿನ ಮಕ್ಕಳ ಪರಿಸ್ಥಿತಿ ಏನು.? ಎಲ್ಲರಿಗೂ ಸೋಂಕು ಹರಡುತ್ತಿದೆ. ಒಬ್ಬ ಮನೆಗೆ ಖಾಯಿಲೆ ತಂದರೆ ಮಕ್ಕಳು ಸೇರಿದಂತೆ ಎಲ್ಲರಿಗೂ ಹರಡುತ್ತಿದೆ. ಈಗಾಗಿ ಮಕ್ಕಳ ವಿಚಾರದಲ್ಲಿ ಯಾವ ತಯಾರಿ ಆಗಿದೆ? ಎಂದರು.
ಹೊರದೇಶಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ. ನಮ್ಮಲ್ಲಿ ಆ ಪ್ರಯತ್ನಗಳೇ ಆಗಿಲ್ಲ. ಆದ್ರೆ 5-6 ಕೋಟಿ ಲಸಿಕೆ ತಯಾರಾಗುತ್ತಿದೆ ಎನ್ನುತ್ತಿದ್ದಾರೆ. 130 ಕೋಟಿ ಜನಸಂಖ್ಯೆ ಇರುವ ಕಡೆ 5-6 ಕೋಟಿ ಲಸಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೂ ಒಂದು ವರ್ಷ ನೀವು ಲಸಿಕೆಯನ್ನೇ ನೀಡುತ್ತಿದ್ರೆ, ಮಕ್ಕಳ ಕಥೆ ಏನು?. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವೈಜ್ಞಾನಿಕ ಯೋಚನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.