ಮಂಡ್ಯ: ಕೆ.ಆರ್. ಪೇಟೆ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸಚಿವ ನಾರಾಯಣಗೌಡ ತಮ್ಮ ನಿವಾಸದಲ್ಲಿ ಸನ್ಮಾನಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್. ಪೇಟೆ ತಾಲೂಕಿನಲ್ಲಿ ಬಿಜೆಪಿಗೆ ನೆಲೆಯಿಲ್ಲ ಅಂದವರಿಗೇ ಇದೀಗ ನೆಲೆಯಿಲ್ಲ. ತಾಲೂಕಿನಲ್ಲಿ ಬಿಜೆಪಿ ಮೊದಲ ಬಾರಿಗೆ ಮೊದಲನೇ ಸ್ಥಾನದಲ್ಲಿದೆ. ಇದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಆರ್ಶೀವಾದ ಎಂದರು.
ಕೆ.ಆರ್. ಪೇಟೆ ಜೆಡಿಎಸ್ ಹಾಗೂ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಜೆಡಿಎಸ್ನವರು ನಮಗೆ ಹೆಚ್ಚು ಪೈಪೋಟಿ ನೀಡಿದ್ದರು. ಆದರೂ ಜನರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದಾರೆ. ಮತದಾರರ ಋಣವನ್ನು ನಮ್ಮೆಲ್ಲ ಅಭ್ಯರ್ಥಿಗಳು ತೀರಿಸುತ್ತಾರೆ ಎಂದು ನುಡಿದರು.
ಸೋತಿರುವ ಅಭ್ಯರ್ಥಿಗಳನ್ನು ಕೂಡ ನಾವು ಕೈಬಿಡುವುದಿಲ್ಲ. ಅವರು ಗೆದ್ದಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಗೆದ್ದಿರುವ ಹಾಗೂ ಸೋತಿರುವ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಸನ್ಮಾನಿಸಲಾಗುವುದು ಎಂದರು.