ಮಂಡ್ಯ: ನಾನೇನಾದರೂ ಹೆಚ್.ಡಿ.ದೇವೇಗೌಡರ ಮಗನಾಗಿದ್ದರೆ ನನ್ನ ರಾಜಕೀಯ ಭವಿಷ್ಯ ಇವತ್ತೇ ಕೊನೆಯಾದರೂ ಕೂಡ ಅವರಿಗೆ ನೋವು ಕೊಟ್ಟು ರಾಜಕಾರಣ ಮಾಡುತ್ತಿರಲಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಹಳೆಯ ಪಾರ್ಟಿ ಜೆಡಿಎಸ್ ಇವತ್ತು ಹೇಗಾಗಿದೆ?, ದೇವೇಗೌಡ್ರು ಇಲ್ಲಿವರೆಗೆ ಬಿಜೆಪಿ ಜೊತೆ ಸೇರಲ್ಲ ಎಂದು ಕಠಿಣವಾಗಿ ಮಾತನಾಡಿದ್ದಾರೆ. ಅದನ್ನು ನಾನು ರಿಪೀಟ್ ಮಾಡಲ್ಲ. ಕುಮಾರಸ್ವಾಮಿ ರಾಜ್ಯದಲ್ಲಿ ಎರಡು ಸಲ ಸಿಎಂ ಆಗಿದ್ದಾರೆ. ದೇವೇಗೌಡ್ರು ಹೊರತುಪಡಿಸಿದರೆ ಕುಮಾರಸ್ವಾಮಿ ಏನು? ಎಂದರು.
ಯಾರೂ ಸಹ ಕೆಂಗಲ್ ಹನುಮಂತಯ್ಯನವರಿಂದ ಇಲ್ಲಿಯವರೆಗೆ ತಂದೆ ಬದುಕಿರುವುವಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಇತಿಹಾಸ ಕರ್ನಾಟಕದಲ್ಲಿ ಇದೆಯೇ?, ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ತೀರಿಕೊಂಡ ಬಳಿಕ ಬಸವರಾಜ ಬೊಮ್ಮಾಯಿ ಸಿಎಂ ಆದರು. ಅಂತಹ ತಂದೆಯ ಮನಸ್ಸಿಗೆ ನೋವು ಮಾಡಿ ಯಾರಿಗೂ ಹೇಳದೆ ಕೇಳದೆ ಕುಮಾರಸ್ವಾಮಿ ಓಡಿ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸೇರುತ್ತಾರೆಂದರೆ ಬಿಜೆಪಿ ಮತ್ತು ಜೆಡಿಎಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದಕ್ಕೆ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾವು ಬಹಳ ಸ್ಟ್ರಾಂಗ್ ಆಗಿದ್ದೇವೆ ಎಂದು ಹೇಳಿದರು.
ಬಿಜೆಪಿಯವರು ಸುಮ್ಮನಿರಲಾಗದೇ ಕೈ ಪರಚುಕೊಳ್ಳುತ್ತಿದ್ದಾರೆ. ಯಾವುದೇ ವಿಚಾರವಿಲ್ಲದೇ ಅತ್ಯಂತ ಹೀನಾಯ ಸ್ಥಿತಿ ತಲುಪಿದ್ದಾರೆ. ಬಿಜೆಪಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ರಾಜ್ಯದ ಬಿಜೆಪಿ ಮುಖಂಡರನ್ನು ಮಾತನಾಡಿಸುವ ಸೌಜನ್ಯ ಆ ಪಕ್ಷದ ರಾಷ್ಟ್ರೀಯ ನಾಯಕರಿಗೆ ಇಲ್ಲ ಎಂದು ಟೀಕಿಸಿದರು.
ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬಂದರೂ ಕೇವಲ 66 ಸೀಟ್ ಗೆದ್ದಿದ್ದಾರೆ. ಇನ್ನೂ ಕೂಡ ಬಿಜೆಪಿಗೆ ಈ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರದ ಜೊತೆ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಬೇಕು. ಒಂದು ಸರ್ಕಾರ ರಚನಾತ್ಮಕವಾಗಿ ಕೆಲಸ ಮಾಡಲು ವಿರೋಧ ಪಕ್ಷದ ನಾಯಕನನ್ನು ಸ್ವಾಗತಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ವಿಪಕ್ಷ ನಾಯಕನನ್ನೂ ಕೊಟ್ಟಿಲ್ಲ ಅಂದ್ರೆ ರಾಜ್ಯದ ನಾಯಕರ ಮೇಲೆ ಕೇಂದ್ರದವರಿಗೆ ವಿಶ್ವಾಸವಿಲ್ಲ ಎಂದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನವರೇ ಆಪರೇಷನ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಶ್ವಥ್ ನಾರಾಯಣ್, ಆರ್.ಅಶೋಕ್, ಸಿ.ಟಿ.ರವಿ ಅವರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಸಿ.ಟಿ.ರವಿ ಮೈ ಪರಚಿಕೊಳ್ಳುತ್ತಿದ್ದು, ಅವರನ್ನು ಅಧ್ಯಕ್ಷನನ್ನಾಗಿ ಮಾಡುತ್ತಿಲ್ಲ. ಪಾಪ ಏನು ಮಾಡುವುದಕ್ಕೆ ಆಗುತ್ತದೆ? ಎಂದರು.
ಇದನ್ನೂ ಓದಿ: ಆರೋಗ್ಯ ಸುಧಾರಣೆಯಾದರೆ ಪ್ರಧಾನಿ ಭೇಟಿ ಮಾಡ್ತೇನಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ