ಮಂಡ್ಯ: "ಒಂದು ಕುಟುಂಬದವರನ್ನು ಬೆಂಬಲಿಸಿದ್ದೀರಾ. ಒಂದೇ ಕುಟುಂಬ ಅಭಿವೃದ್ಧಿ ಆದರೆ ಸಾಕಾ ಯೋಚಿಸಿ" ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆ ಪ್ರಚಾರದ ಹಿನ್ನೆಲೆ ನಗರದದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಭಿಮಾನಿ ಮಂಡ್ಯಕ್ಕೆ ಆಗಮಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಸ್ವಾಗತ ಕೋರಿದರು. ಉತ್ತರ ಪ್ರದೇಶ ಒಂದು ಕಾಲದಲ್ಲಿ ಗೂಂಡಾ ರಾಜ್ಯವಾಗಿತ್ತು. ಜನಸಾಮಾನ್ಯರು ಓಡಾಡಲು ಆಗ್ತಿರಲಿಲ್ಲ. ರೌಡಿಗಳಿಗೆ ಮಾಮೂಲು ಕೊಟ್ಟು ಕೊಟ್ಟು ಸಾಕಾಗಿದ್ದರು. ಯೋಗಿಜೀ ಅಧಿಕಾರಕ್ಕೆ ಬಂದ ನಂತರ ರೌಡಿಗಳು ಭಯದಿಂದ ಓಡೋಗುವ ವಾತಾವರಣ ಇದೆ. ಜನಸಾಮಾನ್ಯರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದು ಗುಣಗಾನ ಮಾಡಿದರು.
ಮುಂದುವರಿದು ಮಾತನಾಡಿದ ಅವರು, ಅಕ್ರಮಗಳನ್ನು ಬುಲ್ಡೋಜರ್‌ನಿಂದ ತಡೆದ ನಾಯಕ ಎಂದರೆ ಅದು ಯೋಗಿಜೀ. ಇದು ನಮ್ಮಲ್ಲೂ ಅನ್ವಯ ಆಗಬೇಕಾದರೆ ಡಬಲ್ ಎಂಜಿನ್ ಸರ್ಕಾರ ಬೆಂಬಲಿಸಿ. ವಿಶ್ವ ಮೆಚ್ಚಿದ ಧೀಮಂತ ನಾಯಕ ನರೇಂದ್ರ ಮೋದಿ. ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಸಾಧಿಸಿದೆ. ಅದು ಮುಂದುವರಿಯಬೇಕು, ಆ ಜವಾಬ್ದಾರಿ ನಮ್ಮ ಕೈಯಲ್ಲಿದೆ. ಮಂಡ್ಯದಲ್ಲಿ ಬದಲಾವಣೆ ಸಂದರ್ಭ ಬಂದಿದೆ. ಪಕ್ಷೇತರ ಸಂಸದೆ ಆಗಿ ಮಾಡಿದ ಸಾಧನೆಗೆ ಸಹಕಾರ ನೀಡಿದ್ದು, ನರೇಂದ್ರ ಮೋದಿ ಸರ್ಕಾರ ಎಂದು ಹೇಳಿದರು.
ಕಳೆದ ಬಾರಿ ಮಂಡ್ಯದಲ್ಲಿ 7ಕ್ಕೆ 7 ಸ್ಥಾನವನ್ನು ಜೆಡಿಎಸ್ ಗೆದ್ದಿತ್ತು. ಆದರೆ ಯಾವುದೇ ಅಭಿವೃದ್ಧಿ ಆಗಿಲ್ಲ. ಮೈ ಶುಗರ್ ಕಾರ್ಖಾನೆ ಓಪನ್ ಮಾಡಲು ಸಂಸದರೇ ಬಂದ್ರು. ಒಂದು ಕುಟುಂಬದವರನ್ನು ಬೆಂಬಲಿಸಿದ್ದೀರಾ. ಒಂದೇ ಕುಟುಂಬ ಅಭಿವೃದ್ಧಿ ಆದರೆ ಸಾಕಾ ಯೋಚಿಸಿ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸಿ ಎಂದು ಕುಮಾರಸ್ವಾಮಿ ಹೆಸರು ಹೇಳದೇ ಸಂಸದೆ ಸುಮಲತಾ ಹರಿಹಾಯ್ದರು.
ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ರಚನೆಯಾಗಿರುವ ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ: ಯೋಗಿ ಆದಿತ್ಯನಾಥ್
ಜೆಡಿಎಸ್ ಭದ್ರಕೋಟೆ ಒಡೆದು ಹೋಗಿದೆ: ಇನ್ನೂ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಮಾತನಾಡಿ, ಮಂಡ್ಯ ಜೆಡಿಎಸ್ ಭದ್ರಕೋಟೆ ಎಂದು ಹೇಳುತ್ತಿದ್ದರು. ಆದರೆ ಆ ಭದ್ರಕೋಟೆ ಒಡೆದು ಹೋಗಿದೆ. ಈ ಬಾರಿ ಏಳಕ್ಕೆ ಏಳು ಸ್ಥಾನವನ್ನ ಬಿಜೆಪಿ ಗೆಲ್ಲಲು ಯೋಗಿ ಶಕ್ತಿ ತುಂಬಲು ಬಂದಿದ್ದಾರೆ. ಏಳಕ್ಕೆ ಏಳು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಅಧಿಕಾರದಲ್ಲಿದ್ದಾಗ ಎಷ್ಟು ಜನರಿಗೆ ಟಿಕೆಟ್ ನೀಡಿದ್ದರು ಎಂದು ಹೇಳಲಿ : ನಳಿನ್ ಕುಮಾರ್ ಕಟೀಲ್
ಬುಲ್ಡೋಜರ್ ಬಾಬಾ: ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅಧಿತ್ಯನಾಥ ಅವರನ್ನು ಬುಲ್ಡೋಜರ್ ಬಾಬಾ ಎಂದು ಘೋಷಣೆ ಕೂಗಿದರು. ಯುಪಿಯಲ್ಲಿ ಬುಲ್ಡೋಜರ್ ಮೂಲಕ ಕಿಡಿಗೇಡಿಗಳ ದಮನ ಮಾಡಿದ್ದಾರೆ. ಇಂದು ಮಂಡ್ಯಕ್ಕೆ ಬಂದು ವಿಪಕ್ಷಗಳನ್ನ ಬುಲ್ಡೋಜರ್‌ನಿಂದ ದಮನ ಮಾಡಲು ಶಕ್ತಿ ತುಂಬಿದ್ದಾರೆ ಎಂದು ಯೋಗಿ ಆದಿತ್ಯನಾಥರನ್ನ ಹಾಡಿ ಹೊಗಳಿದರು.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ರಕ್ತದಲ್ಲಿ ಬರೆದುಕೊಡುವುದು ಬೇಡ, ಪಾಪ ರಕ್ತದ ಕೊರತೆ ಆದ್ರೆ ಕಷ್ಟ : ಕುಮಾರಸ್ವಾಮಿ ವ್ಯಂಗ್ಯ