ಮಂಡ್ಯ: ರಾತ್ರೋರಾತ್ರಿ ತಹಸೀಲ್ದಾರ್ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ, ಮತ್ತೊಬ್ಬ ಅಧಿಕಾರಿಯನ್ನು ಜಿಲ್ಲಾಧಿಕಾರಿ ತಂದು ಕೂರಿಸಿದ ಘಟನೆ ನಡೆದಿದೆ.
ಮಳವಳ್ಳಿ ತಾಲೂಕಿನ ತಹಸೀಲ್ದಾರ್ ಚಂದ್ರಮೌಳಿಯವರನ್ನು ವರ್ಗಾವಣೆ ಮಾಡಿ, ಆ ಸ್ಥಳಕ್ಕೆ ಜಯಣ್ಣ ಎಂಬವರನ್ನು ಜಿಲ್ಲಾಧಿಕಾರಿ ಮಂಜುಶ್ರೀ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಯ ಕಾರಣ ಇನ್ನೂ ನಿಗೂಢವಾಗಿಯೇ ಇದೆ.
ವರ್ಗಾವಣೆಗೆ ಗುದ್ದಲಿ ಪೂಜೆ ಕಾರಣಾನಾ..?
ಶುಕ್ರವಾರ ಮಳವಳ್ಳಿ ತಾಲ್ಲೂಕಿನ ಮಾಗನೂರು ಬಳಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಿದ್ದರಾಮಯ್ಯ ಅವರು ಈ ಹಿಂದೆಯೇ ಗುದ್ದಲಿ ಪೂಜೆ ಮಾಡಿದ್ದರು. ಈಗ ನೀವು ಯಾಕೆ ಮಾಡುತ್ತಿದ್ದೀರಾ ಎಂಬ ಪ್ರಶ್ನೆಯನ್ನು ಎತ್ತಿ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಕಾರ್ಯಕ್ರಮದ ಗೊಂದಲಕ್ಕೆ ತಹಸೀಲ್ದಾರ್ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು ಎನ್ನಲಾಗಿದೆ.
ಮತ್ತೊಂದು ಮೂಲಗಳ ಪ್ರಕಾರ ಕಿಸಾನ್ ಸಮ್ಮಾನ್ ಯೋಜನೆಯ ಸಾಧನೆ ಕಳಪೆ ಹಿನ್ನಲೆ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಇವೆ. ರೈತರಿಗೆ ಯೋಜನೆಯನ್ನು ತಲುಪಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಮಾತುಗಳು ಇವೆ.