ಮಂಡ್ಯ: ಕೆಲವು ದಿನಗಳಿಂದ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಅಣೆಕಟ್ಟೆಯ ನೀರಿನ ಮಟ್ಟದಲ್ಲೂ ದಿನದಿಂದ ದಿನಕ್ಕೆ ಏರಿಕೆ ಕಂಡು ಬರುತ್ತಿದೆ. ಮೂರು ದಿನಗಳಲ್ಲಿ ಜಲಾಶಯಕ್ಕೆ 7 ಅಡಿಯಷ್ಟು ನೀರು ಹರಿದುಬಂದಿದೆ.
ಜಲಾಶಯದ ನೀರಿನ ಮಟ್ಟ 89.16 ಅಡಿಗೆ ಏರಿಕೆಯಾಗಿತ್ತು. ಜಲಾಶಯದಲ್ಲಿ ಒಳಹರಿವಿನ ಪ್ರಮಾಣ 16,588 ಕ್ಯುಸೆಕ್ ಬರುತ್ತಿದ್ದು, ಅಣೆಕಟ್ಟೆಯಿಂದ 1104 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 15.443 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 93.52 ಅಡಿ ನೀರು ದಾಖಲಾಗಿತ್ತು. ಅಂದು ಅಣೆಕಟ್ಟೆಗೆ 2980 ಕ್ಯುಸೆಕ್ ಒಳಹರಿವಿದ್ದು, ಅಣೆಕಟ್ಟೆಯಿಂದ 371 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ಜಲಾಶಯದಲ್ಲಿ 18.146 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಜೂ. 15ರಂದು ಜಲಾಶಯಕ್ಕೆ 1218 ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಅಂದು ನೀರಿನ ಮಟ್ಟ 82.44 ಅಡಿ ಇತ್ತು.
ಕೊಡಗಿನಲ್ಲಿ ಮೂರು ದಿನಗಳಿಂದ ಸತತ ಮಳೆಯಾಗುತ್ತಿದ್ದು, ದಿನದಿಂದ ದಿನಕ್ಕೆ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗುತ್ತಿದೆ. ಜೂ. 16ರಂದು 6815 ಕ್ಯುಸೆಕ್‌ನೊಂದಿಗೆ ಅಣೆಕಟ್ಟೆಯ ನೀರಿನ ಮಟ್ಟ 84.04 ಅಡಿ ತಲುಪಿದರೆ, ಜೂ. 17ರಂದು 10,187 ಕ್ಯುಸೆಕ್ ಒಳಹರಿವಿನೊಂದಿಗೆ ನೀರಿನ ಮಟ್ಟ 85.68 ಅಡಿಗೆ ಏರಿಕೆಯಾಗಿದೆ. ಜೂ. 18ರಂದು ಸಂಜೆ ವೇಳೆಗೆ 14,757 ಕ್ಯುಸೆಕ್ ಒಳಹರಿವಿನೊಂದಿಗೆ ಅಣೆಕಟ್ಟೆಯಲ್ಲಿ 87.96 ಅಡಿ ನೀರು ದಾಖಲಾಗಿದೆ. ಮೂರು ದಿನಗಳಲ್ಲಿ ಅಣೆಕಟ್ಟೆಗೆ 7 ಅಡಿಗಳಷ್ಟು ನೀರು ಸಂಗ್ರಹವಾಗಿದೆ.