ಮಂಡ್ಯ: ಸಕ್ಕರೆ ಜಿಲ್ಲೆಯ ರಾಜಕೀಯ ಅಷ್ಟು ಸುಲಭವಲ್ಲ. ಎಲ್ಲಾ ರಾಜಕೀಯ ಮುಖಂಡರ ವಿಶ್ವಾಸ ಗಳಿಸಬೇಕು, ಆಶೀರ್ವಾದ ಪಡೆಯಬೇಕು, ತನ್ನದೆಯಾದ ಯುವ ಪಡೆಯನ್ನು ಕಟ್ಟಿಕೊಳ್ಳಬೇಕು. ಇಲ್ಲ ಅಂದರೆಬಲು ಕಷ್ಟ.
ಇಂತಹ ಸೂಕ್ಷ್ಮ ವಿಷ್ಯ ತಿಳಿದಿದ್ದ ಅಂಬಿ ರಾಜಕೀಯ ಪ್ರವೇಶಕ್ಕೆ ಮೊದಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಕ್ಷೇತ್ರಕ್ಕೆ ಕಾಲಿರಿಸಿದ್ದರು. ಅಂದರೆ ಸ್ಥಳೀಯ ನಾಯಕರ ವಿಶ್ವಾಸ ಗಳಿಸಿ, ತಮ್ಮ ಅಭಿಮಾನಿಗಳ ಪಡೆ ಕಟ್ಟಿಕೊಂಡು ಚುನಾವಣೆ ಎದುರುಸಿ ಜಯವನ್ನೂ ಗಳಿಸಿದ್ದರು. ಅದೇ ಮಾರ್ಗದಲ್ಲಿ ಈಗ ಸುಮಲತಾ ಅಂಬರೀಶ್ ಹೋಗುತ್ತಿದ್ದಾರೆ. ರಾಜಕೀಯ ಬೇಡ ಎಂದು ಸುಮ್ಮನೆ ಇದ್ದ ಸುಮಲತಾ ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜಕೀಯದ ಎಂಟ್ರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರ ಸಿದ್ಧತೆಯಂತೆ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಮನೆ ಮನೆಗೆ ತೆರಳಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಅಂಬರೀಶ್ ರಾಜಕೀಯ ಪ್ರವೇಶದ ಸಂದರ್ಭದಲ್ಲಿ ಇದೇ ರೀತಿಯಾಗಿ ರಾಜಕೀಯ ಮುಖಂಡರ ಮನೆಗಳಿಗೆ ತೆರಳಿ ಬೆಂಬಲ ಕೋರಿ, ಟಿಕೆಟ್ ಪಡೆದು ರಾಜಕೀಯಪ್ರವೇಶ ಮಾಡಿದ್ದರು. ಸ್ಥಳೀಯ ನಾಯಕತ್ವವೇ ಗೆಲುವಿಗೆ ಬೆನ್ನೆಲುಬು ಎಂಬುದು ಅಂಬಿಯ ನಂಬಿಕೆಯಾಗಿತ್ತು. ಅದರಂತೆ ಈಗ ಸುಮಲತಾ ಅಂಬರೀಶ್ ನಡೆದುಕೊಳ್ಳುತ್ತಿದ್ದಾರೆ.
ಸುಮಲತಾ ತಮ್ಮ 4 ದಿನಗಳ ಪ್ರವಾಸದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರ ಮನೆ ಬಾಗಿಲಿಗೆ ತೆರಳಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಮುಖಂಡರಾದ ಜಿ.ಮಾದೇಗೌಡ, ಎಚ್.ಡಿ.ಚೌಡಯ್ಯ, ಸಿದ್ದರಾಮೇಗೌಡ, ಆತ್ಮಾನಂದ, ಎಂ.ಬಿ.ಶ್ರೀಕಾಂತ್, ಪಂಚಲಿಂಗು, ಶಿವಾನಂದ್, ಪಿ.ಎಂ.ಸೋಮಶೇಖರ್, ಅಂಜನಾ ಶ್ರೀಕಾಂತ್, ರಾಮಲಿಂಗಯ್ಯ, ಶಿವಪ್ಪ ಸೇರಿದಂತೆ ಹಲವರ ಮನೆ ಬಾಗಿಲಿಗೆ ತೆರಳಿ ಬೆಂಬಲ ಕೋರಿದ್ದಾರೆ.
ಮುಖಂಡರ ಮನೆ ಭೇಟಿ ನಂತರ ದೇವಸ್ಥಾನಗಳಿಗೂ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ ಸುಮಲತಾ. ಮಂಡ್ಯದ ಅರ್ಕೇಶ್ವರ, ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ಸೇರಿದಂತೆ ತಮ್ಮ ಮನೆ ದೇವರು ಮುತ್ತೇಗೆರೆ ಮಾಯಮ್ಮ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದ್ದು,ಅಂಬಿ ಹಾಕಿಕೊಟ್ಟ ರಾಜಕೀಯ ನಡೆಯನ್ನೇ ಸುಮಲತಾ ಮುಂದು ವರೆಸಿದ್ದಾರೆ ಎಂದು ಹೇಳಲಾಗಿದೆ. ಮುಖಂಡರ ಭೇಟಿಯ ಜೊತೆಗೆ ಅಭಿಮಾನಿಗಳ ತಂಡ ಕಟ್ಟಿಕೊಂಡು ಹೋರಾಟ ಶುರು ಮಾಡಿದ್ದು, ಅವರ ಸ್ಪರ್ಧೆ ನಂತರ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.