ಮಂಡ್ಯ : ಮತ್ತೆ ತಮಿಳುನಾಡಿಗೆ ನೀರು ಬಿಡಲು ನಿಯಂತ್ರಣ ಸಮಿತಿ ಸೂಚನೆ ಹಿನ್ನೆಲೆಯಲ್ಲಿ ಮಂಡ್ಯದ ಸಂಜಯ ವೃತ್ತದಲ್ಲಿ ವಿಶೇಷವಾಗಿ ಭಿಕ್ಷೆ ಪಾತ್ರೆ ಹಿಡಿದು ರೈತರು ಪ್ರತಿಭಟನೆ ನಡೆಸಿದರು. ಹರಕಲು ಅಂಗಿ, ಚಡ್ಡಿ ಧರಿಸಿ, ಕೆಲವರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು. ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿನೂತನ ಹೋರಾಟ ನಡೆದಿದ್ದು, ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದ ಜನರು ಭಿಕ್ಷೆ ಎತ್ತಬೇಕಾಗುತ್ತೆ ಎಂದು ಅಣಕಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಈಗಾಗಲೇ ನಮ್ಮನ್ನ ಬೀದಿಗೆ ನಿಲ್ಲಿಸಿದೆ ಎಂದು ಕಿಡಿಕಾರಿದರು.
ಕಾವೇರಿ ನಮ್ಮದು, ಕಾವೇರಿ ನಮ್ಮದು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ರಸ್ತೆ ಮೇಲೆ ಉರುಳಾಡಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿ: ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರೈತ ಸಂಘದ ಆಶ್ರಯದಲ್ಲಿ ರೈತರು ಪ್ರತಿಭಟನೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ರಾಜ್ಯ ಸರ್ಕಾರ ರೈತರ ಹಿತ ಕಾಪಾಡುವ ದೃಢ ನಿರ್ಧಾರ ಮಾಡುವ ಮೂಲಕ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು.
ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸದ್ಯಕ್ಕೆ ಕುಡಿಯುವ ನೀರಿಗೂ ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮುನ್ನಡೆಯಬೇಕೆಂದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಜಗದೀಶ್ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನ್ಯಾಯವಾಗುತ್ತಿದ್ದು, ನೈರುತ್ಯ ಮುಂಗಾರು ತಿಂಗಳ ಅಂತ್ಯದಲ್ಲಿ ಕೊನೆಯಾಗಲಿದ್ದು, ಕಾವೇರಿ ಕಣಿವೆ ಪ್ರದೇಶಕ್ಕೆ ಮತ್ತೆ ಮಳೆ ಸುರಿಯುವ ಸಾಧ್ಯತೆ ತೀರಾ ಕಡಿಮೆ. ಆದರೆ, ತಮಿಳುನಾಡಿನಲ್ಲಿ ಮಳೆ ಆರಂಭವಾಗಲಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ಮಾಡಬೇಕಾಗಿದೆ ಎಂದರು. ಇಂಡವಾಳು ಸಿದ್ದೇಗೌಡ, ಸುರೇಶ್, ನಾಗರಾಜ್ ಗಾಣದಾಳು ನೇತೃತ್ವ ವಹಿಸಿದ್ದರು.
ಕಾಮನ್ ಸೆನ್ಸ್ ಪ್ರತಿಭಟನೆ : ತಮಿಳುನಾಡಿಗೆ ಮತ್ತೆ ನೀರು ಬಿಡಲು ಕಾವೇರಿ ಪ್ರಾಧಿಕಾರದ ಸೂಚನೆ ಹಿನ್ನೆಲೆ ಮಂಡ್ಯದಲ್ಲಿ ಯೂತ್ ಗ್ರೂಪ್‌ನಿಂದ ವಿಶೇಷವಾಗಿ ಕಾಮನ್ ಸೆನ್ಸ್ ಪ್ರತಿಭಟನೆ ನಡೆಸಲಾಯಿತು. ಕಪ್ಪುಪಟ್ಟಿ ಕಟ್ಟಿಕೊಂಡು ಬೆಂಕಿ ಹಿಡಿದು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮಂಡ್ಯ ಯೂತ್ ಗ್ರೂಪ್‌ನಿಂದ ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಂಕಿ ಹಿಡಿದು ಕಾಮನ್ ಸೆನ್ಸ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಯೂತ್ ಗ್ರೂಪ್ ಅಧ್ಯಕ್ಷ ಡಾ. ಅನಿಲ್ ಆನಂದ್ ಮಾತನಾಡಿ, ಕಾವೇರಿ ಮಕ್ಕಳ ಹೊಟ್ಟೆಯಲ್ಲಿ ಬೆಂಕಿ ಉರಿಯುತ್ತಿದೆ. ಕಾವೇರಿ ನೀರಾವರಿ ಸಮಿತಿ ನೀಡಿರುವ ಆದೇಶ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಈಗ ನೀರು ಬಿಡಲ್ಲ ಎಂದಿರುವುದು ಸ್ವಾಗತ. ಮುಂದೆಯೂ ಇದೇ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿರಬೇಕು. ಕಾವೇರಿ ವಿಚಾರದಲ್ಲಿ ಜನರಿಗೆ ಇರೋ ಕಾಮನ್ ಸೆನ್ಸ್ ಪ್ರಾಧಿಕಾರದ ಸಮಿತಿಗೆ ಇಲ್ಲ. ಕಾಮನ್ ಸೆನ್ಸ್ ಇಟ್ಟುಕೊಂಡು ಕಾವೇರಿ ಆದೇಶಗಳನ್ನು ನೀಡಬೇಕು. ಪ್ರಾಧಿಕಾರ ಹಾಗೂ ಸಮಿತಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Cauvery water crisis: ಮಂಡ್ಯದಲ್ಲಿ ತೀವ್ರಗೊಂಡ ಕಾವೇರಿ ಕಿಚ್ಚು.. ಹೆದ್ದಾರಿ ತಡೆದು ರೈತರ ಪ್ರತಿಭಟನೆ