ಮಂಡ್ಯ: ಮದ್ದೂರು ತಾಲ್ಲೂಕಿನ ಹೊಟ್ಟೆಗೌಡನ ದೊಡ್ಡಿಯಲ್ಲಿ ಅಂಬಿ ಜನ್ಮ ದಿನದಲ್ಲಿ ಹಬ್ಬ ಮಾಡಿದರೆ, ಪಾಂಡವಪುರ ತಾಲ್ಲೂಕಿನ ಅಭಿಮಾನಿಯೊಬ್ಬರು ವಿಶೇಷ ಪ್ರೀತಿ ತೋರಿದ್ದಾರೆ.
ಉಲ್ಟಾ ಸಿಂಗರ್ ಖ್ಯಾತಿಯ ಪ್ರಕಾಶ ಬೇವಿನಕುಪ್ಪೆ, ರೆಬಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯಾಗಿದ್ದು,ಅಂಬಿ ನಟಿಸಿರುವ ಸಿನಿಮಾದ ಹೆಸರುಗಳನ್ನು ಹಾಗೂ ಅವರ ಕುಟುಂಬದ ಹೆಸರುಗಳನ್ನು ತನ್ನ ಕೈ ಮೇಲೆ ಕೈವಾರದಿಂದ ಬರೆದುಕೊಂಡು ಅಭಿಮಾನ ಮೆರೆದಿದ್ದಾರೆ.
ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಪ್ರಕಾಶ್ ತನ್ನ ಕೈ ಮೇಲೆ ಅಂಬರೀಶ್, ಸುಮಲತಾ ಹಾಗೂ ಅಭಿ ಎಂದು ಬರೆದುಕೊಂಡಿರುವುದಲ್ಲದೇ ಅಂಬರೀಶ್ ಅವರ ನಟನೆಯ ಚಿತ್ರಗಳಾದ ಚಕ್ರವ್ಯೂಹ, ಅಂತ, ಗುರು, ಹಬ್ಬ, ಅಜಿತ್, ಕದನ, ಆಹುತಿ, ಅಮರ್, ಇಂದ್ರಜಿತ್, ಮೃಗಾಲಯ, ದಿಗ್ಗಜರು, ಕಾಲಚಕ್ರ, ಸತ್ಕಾರ, ಚದುರಂಗ ಸೇರಿದಂತೆ ಇತರೆ ಚಿತ್ರಗಳ ಹೆಸರನ್ನು ಕೈ ಮೇಲೆ ಬರೆದುಕೊಂಡು ಅಭಿಮಾನವನ್ನು ತೋರಿದ್ದಾರೆ. ಪ್ರಕಾಶ್ ಅವರು ಮೇ.29ರಂದು ಅಂಬರೀಶ್ ಹುಟ್ಟುಹಬ್ಬ ಹಿನ್ನೆಲೆ ಈ ರೀತಿಯ ಪ್ರೀತಿ ತೋರಿದ್ದಾರೆ ಎನ್ನಲಾಗಿದೆ.
ಪ್ರತಿವರ್ಷ ಮೇ.29ರ ಅಂಬರೀಶ್ ಹುಟ್ಟುಹಬ್ಬದ ದಿನದಂದು ಊರಿನಲ್ಲಿ ಸಿಹಿ ಹಂಚಿ ಬಾಡೂಟವನ್ನು ಹಾಕಿಸುವುದರ ಮೂಲಕ ಅಂಬರೀಶ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.
ಕನ್ನಡ ಚಿತ್ರಗೀತೆಗಳನ್ನು ನೇರವಾಗಿ ಹಾಡುವವರ ಮಧ್ಯೆ ರಿವರ್ಸ್ ಶೈಲಿಯಲ್ಲಿ ಹಾಡುವುದರ ಮೂಲಕ ಪ್ರಕಾಶ್ ಉಲ್ಟಾ ಸಿಂಗರ್ ಎಂದೇ ಪರಿಚಿತರು.