ಗಂಗಾವತಿ: ದುರಾಡಳಿತ ಮಾಡುತ್ತಿರುವ ಮತ್ತು ಸತ್ತ ಹೆಣದ ಮೇಲೂ ರಾಜಕೀಯ ಮಾಡುತ್ತಿರುವ ಬಿಜೆಪಿಯ ದುಷ್ಟರಿಗೆ ಒಳ್ಳೆ ಬುದ್ದಿ ನೀಡಲಿ ಎಂದು ಪ್ರಾರ್ಥಿಸಿ ಭಗವಂತನ ಮೊರೆ ಹೋಗುತ್ತಿದ್ದೇನೆ. ಹೀಗಾಗಿ, ಹನುಮಂತ ದೇವರ ಮಾಲೆ ಧರಿಸಿ ವೃತ ಕೈಗೊಳ್ಳುತ್ತಿದ್ದೇನೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಬಹಳ ವರ್ಷದಿಂದ ಹನುಮ ಮಾಲೆ ಹಾಕಬೇಕು ಎಂಬ ಆಸೆ ಇತ್ತು. ಎರಡು-ಮೂರು ವರ್ಷದಿಂದ ಕೊರೊನಾದಿಂದಾಗಿ ಮಾಲೆ ಹಾಕಿರಲಿಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮಾಲೆ ಹಾಕುತ್ತಿದ್ದೇನೆ ಎಂದರು.
ಯಾರೋ ಹಾಕುತ್ತಾರೆ ಎಂದು ನಾನು ದೇವರ ಮಾಲೆ ಧರಿಸುವುದಾಗಲಿ, ಯಾರೋ ಅನೌನ್ಸ್ ಮಾಡಿದ ಕೂಡಲೇ ಅವರಿಗಿಂತಲೂ ಮೊದಲು ಮಾಲೆ ಹಾಕುವಂತಹ ಮನಸ್ಥಿತಿಯವರು ಬೇರೆಯೇ ಇದ್ದಾರೆ ಎಂದು ಪರೋಕ್ಷವಾಗಿ ಬಸವರಾಜ ದಢೇಸೂಗೂರು ಅವರಿಗೆ ಟಾಂಗ್ ನೀಡಿದರು.
ಕನಕಗಿರಿ ಕ್ಷೇತ್ರದಲ್ಲಿ ಹನುಮ ಮಾಲಧಾರಣೆಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು. ಈ ಬಗ್ಗೆ ಕಾರಟಗಿಯಲ್ಲಿ ಮಾತನಾಡುತ್ತಾ, ನಾನು ಮಾಲಾಧಾರಣೆ ಮಾಡಿದ ಬಳಿಕ ಮಾಜಿ ಸಚಿವ ತಂಗಡಗಿ ಹನುಮ ಮಾಲೆ ಧರಿಸುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಹನುಮಮಾಲೆ ಧಾರಣೆ ಮಾಡುವುದು ಧಾರ್ಮಿಕ ನಂಬಿಕೆ. ಕೇವಲ ತಂಗಡಗಿ ಮಾತ್ರವಲ್ಲ, ಅವರ ಇಡೀ ಕುಟುಂಬ ಹನುಮ ಮಾಲಾಧಾರಣೆ ಮಾಡಲಿ ಎಂದರು.
ಇದನ್ನೂ ಓದಿ: 'ನೀವು ಮಾಡುತ್ತಿರುವ ರಾಜಕೀಯ ನಿಮ್ಮ ಹೊಟ್ಟೆ ಪಾಡಿಗೆ': ಹೆಚ್ಡಿಕೆಗೆ ಕಾಳಿ ಸ್ವಾಮಿ ಕಿಡಿ