ಕೊಪ್ಪಳ:ನಗರದ ಕ್ಲಬ್ ರಸ್ತೆ ಮೂಲಕ ಗಣೇಶ ನಗರ ಸೇರಿದಂತೆ ಅನೇಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರೈಲ್ವೆ ಹಳಿ ಗೇಟ್ ನಂಬರ್ 63 ರಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ವರ್ಷ ಕಳೆದರೂ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ಆ ಭಾಗದ ಜನರು ಪ್ರಯಾಸಪಟ್ಟು ಹಳಿ ದಾಟಬೇಕಾದ ಅನಿವಾರ್ಯತೆ ಮುಂದುವರೆದಿದೆ.
ಸಾರ್ವಜನಿಕರ ಹೋರಾಟದ ಫಲವಾಗಿ ರೇಲ್ವೆ ಗೇಟ್ ನಂಬರ್ 63 ರಲ್ಲಿ ಸುಮಾರು 4.1 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ಕೆಳ ಸೇತುವೆ ನಿರ್ಮಾಣಕ್ಕೆ ಟೆಂಡರ್ ಸಹ ಕರೆದು ಕಳೆದ ವರ್ಷ ಭೂಮಿ ಪೂಜೆ ಸಹ ನೆರವೇರಿಸಲಾಗಿದೆ. ಕೆಳ ಸೇತುವೆಗೆ ಬೇಕಾದ ಪೂರಕ ವಸ್ತುಗಳನ್ನು ತಂದು ಅಲ್ಲಿ ಇರಿಸಲಾಗಿದೆ. ಆದರೆ, ಸೇತುವೆ ಕಾಮಗಾರಿ ಇನ್ನೂ ಸಹ ಪ್ರಾರಂಭವಾಗಿಲ್ಲ.
ಕೊರೊನಾ ನೆಪವೊಡ್ಡಿ ಕಾಮಗಾರಿ ನಡೆಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಈಗ ಎಲ್ಲ ಚಟುವಟಿಕೆಗಳು ಶುರುವಾಗಿವೆ. ಆದರೂ ರೈಲ್ವೆ ಗೇಟ್ ನಂಬರ್ 63 ರಲ್ಲಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಶುರುವಾಗದೇ ಇರುವುದು ಈ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ. ಈ ಭಾಗದಿಂದ ಕೊಪ್ಪಳಕ್ಕೆ ರೈಲ್ವೆ ಹಳಿ ದಾಟಿಕೊಂಡು ಹೋಗಬೇಕು.
ವಿದ್ಯಾರ್ಥಿಗಳು, ವಯಸ್ಸಾದವರು ಪ್ರಯಾಸಪಟ್ಟು ಓಡಾಡಬೇಕಿದೆ. ನಮ್ಮ ಸಮಸ್ಯೆ ಯಾವಾಗ ಬಗೆಹರಿಯುತ್ತದೆಯೋ ಏನೋ ಎನ್ನುತ್ತಾರೆ ಸ್ಥಳೀಯರು. ಭೂಮಿಪೂಜೆ ಮಾಡಿ ವರ್ಷವಾದರೂ ಸಹ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.