ಕುಷ್ಟಗಿ (ಕೊಪ್ಪಳ): ಜಮೀನಿನಲ್ಲಿ ಕಟ್ಟಿದ್ದ ಎತ್ತುಗಳನ್ನು ಕದ್ದೊಯ್ದಿರುವ ಘಟನೆ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ನಡೆದಿದೆ.
ಶರಣಪ್ಪ ಹಾದಿಮನಿ ಎಂಬ ರೈತನಿಗೆ ಸೇರಿದ ಸುಮಾರು 1 ಲಕ್ಷ ರೂ. ಬೆಲೆಬಾಳುವ ಎತ್ತುಗಳನ್ನು ಕದಿಯಲಾಗಿದೆ. ಶರಣಪ್ಪ ಕಳೆದ ಶನಿವಾರ ಸಂಜೆ ಜಮೀನಿನಲ್ಲಿ ಎತ್ತುಗಳನ್ನು ಕಟ್ಟಿದ್ದರು. ಭಾನುವಾರ ಬೆಳಗ್ಗೆ ಹೋಗಿ ನೋಡಿದಾಗ ಎತ್ತುಗಳಿರಲಿಲ್ಲ. ಇದರಿಂದ ಕಂಗಾಲಾದ ರೈತ ಕುಷ್ಟಗಿ, ಮುದಗಲ್ ಇನ್ನಿತರ ಜಾನುವಾರು ಸಂತೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಊರೆಲ್ಲಾ ಹುಡುಕಿದರೂ ಎತ್ತುಗಳು ಮಾತ್ರ ಸಿಕ್ಕಿಲ್ಲ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎತ್ತುಗಳನ್ನು ಹುಡುಕಿಕೊಡುವಂತೆ ಶರಣಪ್ಪ ಪೊಲೀಸರಿಗೆ ಮನವಿ ಮಾಡಿದ್ದಾರೆ.