ಕೊಪ್ಪಳ: ಶಾಲೆಗಳು ಆರಂಭವಾದ ಬಳಿಕ ಜಿಲ್ಲೆಯಲ್ಲಿ ಓರ್ವ ಶಿಕ್ಷಕಿಗೆ ಮಾತ್ರ ಕೊರೊನಾ ಸೋಂಕು ತಗುಲಿದೆ. ಆ ಶಾಲೆಯನ್ನು ಈಗಾಗಲೇ ಸ್ಯಾನಿಟೈಸೇಷನ್ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿಯೂ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳನ್ನು ಆರಂಭ ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಒಟ್ಟು 5,660 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 4,441 ಜನ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಓದಿ:ಕೊಪ್ಪಳ: ದಿನದಿಂದ ದಿನಕ್ಕೆ ಶಾಲಾ ಮಕ್ಕಳ ಹಾಜರಾತಿ ಏರಿಕೆ
ಈ ಪೈಕಿ ಓರ್ವ ಶಿಕ್ಷಕಿಗೆ ಕೊರೊನಾ ಸೋಂಕು ತಗುಲಿದೆ. ಅವರು ಈಗ ಹೋಂ ಐಸೋಲೇಷನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಆ ಶಾಲೆಯನ್ನು ಈಗಾಗಲೇ ಸ್ಯಾನಿಟೈಸೇಷನ್ ಮಾಡಿಸಲಾಗಿದೆ. ಉಳಿದ ಶಿಕ್ಷಕರನ್ನು ಬಳಸಿಕೊಂಡು ಆ ಶಾಲೆಯನ್ನು ಪುನರಾರಂಭಿಸಲಾಗುತ್ತದೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಹೇಳಿದರು.