ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿನ ಹೈಮಾಸ್ಟ್ ವಿದ್ಯುದ್ದೀಪಗಳು ಕಳೆದ ಐದಾರು ತಿಂಗಳಿನಿಂದ ಕೆಟ್ಟು ನಿಂತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತ, ಮಾರುತಿ ವೃತ್ತ, ಕಾರ್ಗಿಲ್ ವೃತ್ತ, ಸಂತೆ ಬಜಾರ್, ಕನಕದಾಸ ವೃತ್ತಗಳಲ್ಲಿನ ಹೈಮಾಸ್ಟ್ ವಿದ್ಯುದ್ದೀಪಗಳು ಕೆಟ್ಟುನಿಂತಿವೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪಟ್ಟಣದ ಹೊರವಲಯದ ರಾಷ್ತ್ರೀಯ ಹೆದ್ದಾರಿ ಮೇಲ್ಸೇತುವೆ ಝಗಮಗಿಸಿದರೆ, ಕುಷ್ಟಗಿ ಪಟ್ಟಣ ರಾತ್ರಿಯಾಗುತ್ತಿದ್ದಂತೆ ಕತ್ತಲ ಕೂಪವಾಗುತ್ತಿದೆ.
ಕನಕದಾಸ ವೃತ್ತ ಹಾಗೂ ಮಾರುತಿ ವೃತ್ತದ ಹೈಮಾಸ್ಟ್ ವಿದ್ಯುದ್ದೀಪದ ಗುಚ್ಛ ದುರಸ್ಥಿಗಾಗಿ ಕೆಳಗಿಳಿಸಿ ಹಾಗೆಯೇ ಬಿಟ್ಟಿದ್ದಾರೆ. ಈ ವಿದ್ಯುದ್ದೀಪದ ಕಂಬದ ಅಡಿಯಲ್ಲಿ ತಂತಿ ತುಂಡಾಗಿದ್ದು, ಅಪಾಯದ ಸ್ಥಿತಿಯಲ್ಲಿದ್ದರೂ ಪುರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.