ಗಂಗಾವತಿ: ಕಳೆದ ನಾಲ್ಕೈದು ದಿನಗಳಿಂದ ಆನೆಗೊಂದಿ ಪರಿಸರದಲ್ಲಿ ಓಡಾಡುತ್ತಿದ್ದ ಚಿರತೆಗಳು ಹೆಚ್ಚಾಗಿ ದುರ್ಗಾದೇವಿ ಬೆಟ್ಟದ ಸುತ್ತಲಿನ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ಸಂಜೆ ಚಿರತೆಯೊಂದು ಕಂಡು ಬಂದಿದ್ದು ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ದುರ್ಗಾದೇವಿ ಬೆಟ್ಟದಲ್ಲಿ ಯುವಕನ ಮೇಲೆ ದಾಳಿ ಮಾಡಿ ಆತನ ಸಾವಿಗೆ ಕಾರಣವಾದ ಹಿನ್ನೆಲೆ ಚಿರತೆ ಸೆರೆಗೆ ಅರಣ್ಯ ಇಲಾಖೆ ನಾನಾ ತಂತ್ರದ ಮೊರೆ ಹೋಗಿದೆ. ಈಗಾಗಲೇ ದುರ್ಗಾ ಬೆಟ್ಟ, ವಿರುಪಾಪುರ ಗಡ್ಡೆ, ಬೆಂಚ್ ಕುಟ್ರಿ, ಕರಿಯಮ್ಮನ ಗಡ್ಡಿ, ಮಧುವನದಂತ ಪ್ರದೇಶದಲ್ಲಿ ಚಿರತೆಗಳ ಓಡಾಟ ಕಂಡು ಬಂದ ಹಿನ್ನೆಲೆ ಅರಣ್ಯ ಇಲಾಖೆ ಬೋನು ಇಟ್ಟು ಸೆರೆಗೆ ಯೋಜನೆ ರೂಪಿಸಿತ್ತು.
ಆದರೆ, ಇಲಾಖೆಯ ಯಾವ ತಂತ್ರಗಳಿಗೂ ಜಗ್ಗದೇ ಚಿರತೆಗಳು ಸ್ವಚ್ಛಂದವಾಗಿ ಓಡಾಡುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಮುಖ್ಯವಾಗಿ ಅಂಜನಾದ್ರಿ ಬೆಟ್ಟಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಚಿರತೆಗಳ ಓಡಾಟದಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.