ಕುಷ್ಟಗಿ (ಕೊಪ್ಪಳ) : ಕೋವಿಡ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮದ ಭಯ ಬೇಡ. ಕುಷ್ಟಗಿ ತಾಲೂಕಿನ ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, ಯಾರಿಗೂ ಅಡ್ಡ ಪರಿಣಾಮಗಳಾಗಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಆನಂದ್ ಗೋಟೂರು ತಿಳಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನವರಿ 16 ರಿಂದ ಕೋವಿಡ್ ವ್ಯಾಕ್ಸಿನೇಷನ್ ಆರಂಭವಾಗಿದೆ. ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕುಷ್ಟಗಿ ತಾಲೂಕಿನ 1,374 ಜನರಿಗೆ ವ್ಯಾಕ್ಸಿನ್ ಹಾಕುವ ಗುರಿ ಹೊಂದಲಾಗಿತ್ತು. ಈ ಪೈಕಿ ಶೇ.65ರಷ್ಟು ಅಂದರೆ 891 ಮಂದಿಗೆ ವ್ಯಾಕ್ಸಿನೇಶನ್ ಪೂರ್ಣಗೊಂಡಿದೆ ಎಂದರು.
ಒಟ್ಟು 361 ಆರೋಗ್ಯ ಸಿಬ್ಬಂದಿ ಪೈಕಿ 276,258 ಆಶಾ ಕಾರ್ಯಕರ್ತೆಯರ ಪೈಕಿ 205,384 ಅಂಗನವಾಡಿ ಕಾರ್ಯಕರ್ತೆಯರ ಪೈಕಿ 218 ಹಾಗೂ 371 ಅಂಗನವಾಡಿ ಸಹಾಯಕಿಯರ ಪೈಕಿ 192 ಮಂದಿಗೆ ಲಸಿಕೆ ನೀಡಲಾಗಿದೆ.
ಪೊಲೀಸರು, ಕಂದಾಯ ಇಲಾಖೆ, ಪೌರ ಕಾರ್ಮಿಕರು, ಗೃಹರಕ್ಷಕರಿಗೂ ಲಸಿಕೆ ಹಾಕಲಾಗುತ್ತಿದೆ. ಗೃಹರಕ್ಷಕರು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದ್ದು, ಸಂಬಂಧಿಸಿದವರಿಗೆ ವಿಷಯ ತಿಳಿಸಲಾಗುವುದು ಎಂದರು.