ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪುರಸಭೆಗೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಗೆ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಚುನಾವಣೆಯಲ್ಲಿ ತಲಾ ಮೂರು ಮತಗಳ ಅಂತರದಲ್ಲಿ ಬಿಜೆಪಿ ನಿರೀಕ್ಷಿತ ಗೆಲವು ಸಾಧಿಸಿದೆ.
ಕಾಂಗ್ರೆಸ್ 12 ಸ್ಥಾನ, ಬಿಜೆಪಿ 8 ಹಾಗೂ ಪಕ್ಷೇತರ, ಓರ್ವ ಅವಿರೋಧ ಆಯ್ಕೆಯೊಂದಿಗೆ ಒಟ್ಟು ಸದಸ್ಯ ಬಲ 23 ಇತ್ತು. ಇದರಲ್ಲಿ ಬಿಜೆಪಿ 8, ಇಬ್ಬರು ಪಕ್ಷೇತರ, ಒಬ್ಬ ಅವಿರೋಧವಾಗಿ ಆಯ್ಕೆ ಆಗಿದ್ದ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆಯನ್ನ 11ಕ್ಕೆ ಹೆಚ್ಚಿಸಿಕೊಂಡಿತ್ತು. ಅಧಿಕಾರದ ಗದ್ದುಗೆಗೆ ಏರಲು ಇನ್ನು 2 ಸ್ಥಾನಕ್ಕಾಗಿ ಕಾಂಗ್ರೆಸ್ನ ಇಬ್ಬರು ಸದಸ್ಯರನ್ನು ಸೆಳೆದುಕೊಳ್ಳಲು ಯಶಸ್ವಿಯಾಗಿದ್ದರಿಂದ ಬಿಜೆಪಿ ಸದಸ್ಯ ಬಲ 13 ಕ್ಕೆ ಏರಿಕೆ ಆಗಿತ್ತು. ಈ ಮೂಲಕ ಪುರಸಭೆ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 21ನೇ ವಾರ್ಡ್ ಬಿಜೆಪಿ ಸದಸ್ಯ ಗಂಗಾಧರಸ್ವಾಮಿ ಹಿರೇಮಠ, 16ನೇ ವಾರ್ಡ್ ಪಕ್ಷೇತರ ಸದಸ್ಯೆ ರಾಜೇಶ್ವರಿ ಆಡೂರು ಇವರ ಪ್ರತಿ ಸ್ಪರ್ಧಿ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಾಗರಾಜ ಹಿರೇಮಠ, 13ನೇ ವಾರ್ಡ್ನ ಜರೀನಾ ಬೇಗಂ ಕಾಯಿಗಡ್ಡಿ ನಿಗದಿತ ವೇಳೆಯಲ್ಲಿ ನಾಮಪತ್ರ ಸಲ್ಲಿಸಿದ್ದರು.
ಇಂದು ನಡೆದ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ತಲಾ 14 ಮತಗಳು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ 11 ಮತಗಳು ಬಂದವು. ಚುನಾವಣಾಧಿಕಾರಿ, ತಹಶೀಲ್ದಾರ್ ಎಂ.ಸಿದ್ದೇಶ ಅವರು, ಗಂಗಾಧರಸ್ವಾಮಿ ಹಿರೇಮಠ ಅವರನ್ನು ನೂತನ ಅಧ್ಯಕ್ಷರೆಂದು, ರಾಜೇಶ್ವರಿ ಆಡೂರು ಅವರನ್ನು ಉಪಾಧ್ಯಕ್ಷರೆಂದು ಅಧಿಕೃತವಾಗಿ ಘೋಷಿಸಿದರು. ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಹಾಗೂ ಕಾಂಗ್ರೆಸ್ ಪರವಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮತ ಚಲಾಯಿಸಿದ್ದು ವಿಶೇಷವೆನಿಸಿತು.
ವಿಜಯೋತ್ಸವ:
ಈ ಚುನಾವಣೆ ನಿರೀಕ್ಷಿತ ಅಧಿಕೃತ ಫಲಿತಾಂಶ ತಿಳಿಯಲು ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿ ಅಭಿಮಾನಿಗಳು ಬಿಸಿಲನ್ನೂ ಲೆಕ್ಕಿಸದೇ ನಿಂತಿದ್ದರು. ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆ ಕೊರೊನಾ ಭೀತಿ ಇಲ್ಲದೇ ಸಾಮಾಜಿಕ ಅಂತರ ಮರೆತು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಆಕ್ರೋಶ:
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆಯನ್ನು ಯಾವತ್ತಿಗೂ ಪ್ರತಿಷ್ಠೆಯಾಗಿ ತೆಗೆದುಕೊಂಡಿರಲಿಲ್ಲ. ಪಕ್ಷದ ವಿಪ್ ಇದ್ದಾಗ್ಯೂ ವಿಪ್ ಉಲ್ಲಂಘಿಸಿರುವ ಇಬ್ಬರು ಸದಸ್ಯರಿಗೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ. ಇಂತಹ ನೀತಿಗೆಟ್ಟವರನ್ನು ಆಯ್ಕೆ ಮಾಡಿದರೆ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ ಎಂದರು.