ಕೊಪ್ಪಳ: ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಗೇಟ್ ಕಿತ್ತು ನೀರು ನುಗ್ಗಿದ್ದ ಪ್ರದೇಶಕ್ಕೆ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೀರು ನುಗ್ಗಿ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಜನರಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ, ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಸುಮಾರು 1 ಲಕ್ಷ ಕೋಟಿ ಸ್ವತ್ತು ಹಾನಿಯಾಗಿದೆ. 2009ರಲ್ಲಿ ಉಂಟಾಗಿದ್ದ ಪ್ರವಾಹದ ಪರಿಸ್ಥಿತಿಯನ್ನು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್, ಯುಪಿಎ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದರು. ಅಲ್ಲದೆ 1600 ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು.
ಆದರೆ, ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯ ಅವಲೋಕನಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿಲ್ಲ. ಪ್ರಧಾನಿ ಮೋದಿಯವರಿಗೆ ವಿದೇಶ ಸುತ್ತಲು ಸಮಯವಿದೆ. ಪ್ರವಾಹ ಪೀಡಿತ ಪ್ರದೇಶಕ್ಕೆ ಬರಲು ಸಮಯವಿಲ್ಲ. ಪ್ರವಾಹ ಪೀಡಿತ ಪ್ರದೇಶದಲ್ಲಿ ಯುದ್ಧೋಪಾದಿಯಲ್ಲಿ ಪರಿಹಾರ ಕೆಲಸಗಳು ನಡೆಯಬೇಕು. ಕೇಂದ್ರದಿಂದ ಕೇವಲ 223 ಕೋಟಿ ಹಣ ಬಂದಿದೆ. ಅದರಲ್ಲಿ ಕೇಂದ್ರದ ಪಾಲು 202 ಕೋಟಿ ಮಾತ್ರ. ಉತ್ತರ ಕರ್ನಾಟಕದಲ್ಲಾದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಣೆ ಮಾಡಿ ತಕ್ಷಣ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರಿಗೆ ಜನರ ಸಂಕಷ್ಟ ಬೇಕಿಲ್ಲ. ಅವರು ತಮ್ಮ ಸರ್ಕಾರದ ಗುಂಗಿನಲ್ಲಿದ್ದಾರೆ. ಬೀಜ, ಗೊಬ್ಬರ ಕೇಳಿದ ರೈತರಿಗೆ ಗುಂಡು ಹೊಡೆಸುತ್ತಾರೆ. ನ್ಯಾಯ ಕೇಳಿದರೆ ಲಾಠಿ ಚಾರ್ಜ್ ಮಾಡಿಸುತ್ತಾರೆ. ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವಾಗ ಬಿಜೆಪಿ ನಾಯಕರು ಪರಿಸ್ಥಿತಿ ಅವಲೋಕನಕ್ಕೆ ಪ್ರಧಾನಿಯನ್ನು ಯಾಕೆ ಒತ್ತಾಯ ಮಾಡಿ ಕರೆಸಲಿಲ್ಲ ಎಂದು ವಿ.ಎಸ್.ಉಗ್ರಪ್ಪ ಪ್ರಶ್ನೆ ಮಾಡಿದರು.