ಕೊಪ್ಪಳ: ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕೊಪ್ಪಳ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಮತ ಎಣಿಕೆಯ ಸಿದ್ಧತೆ ಕುರಿತಂತೆ ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಪ್ರಾರಂಭವಾಗಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ್ತು ಅಂಚೆ ಮತಗಳ ಎಣಿಕೆಯು ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ನಾಲ್ಕು ಟೇಬಲ್ಗಳಲ್ಲಿ ನಡೆಯಲಿದೆ.
ಬೆಳಗ್ಗೆ 7.45ಕ್ಕೆ ಇವಿಎಂಗಳಿರುವ ಸ್ಟ್ರಾಂಗ್ ರೂಂ ಓಪನ್ ಮಾಡಲಾಗುತ್ತದೆ. ಮತ ಎಣಿಕೆ ಸಿಬ್ಬಂದಿ ಸೇರಿದಂತೆ ಏಜೆಂಟರಿಗೆ ಪ್ರವೇಶ ಪತ್ರ ನೀಡಲಾಗಿದೆ. ಪ್ರವೇಶ ಪತ್ರ ಇಲ್ಲದವರಿಗೆ ಯಾವುದೇ ಕಾರಣಕ್ಕೂ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ. ಮತ ಎಣಿಕೆಯ ಪ್ರತಿ ಸುತ್ತಿನ ಮಾಹಿತಿಯನ್ನು ಸುವಿಧ ಮೂಲಕ ಮತ್ತು ಸಾರ್ವಜನಿಕರಿಗೆ ಹೊರಗೆ ಧ್ವನಿವರ್ಧಕದ ಮೂಲಕ ನೀಡಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಬೂತ್ನಂತೆ ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ವಿವಿ ಪ್ಯಾಟ್ಗಳ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.