ಕೊಪ್ಪಳ: ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಅನ್ಯಕೋಮಿನ ಯುವಕನನ್ನು ಕುಷ್ಟಗಿ ತಾಲೂಕಿನ ಯುವತಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದ ಬಹು ಬಳಕೆಯ ಅಂಗವಾಗಿರುವ ಇನ್ಸ್ಟಾಗ್ರಾಮ್ನಲ್ಲಿ ಕುಷ್ಟಗಿಯ ಯುವತಿಗೆ, ಹೈದರಾಬಾದ್ ಮೂಲದ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಅನ್ಯಕೋಮಿನ ಯುವಕನ ಪರಿಚಯವಾಗಿರುತ್ತದೆ. ಪ್ರಾರಂಭದಲ್ಲಿ ಇವರಿಬ್ಬರ ನಡುವೆ ಸ್ನೇಹವಾಯಿತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಡಿಸೆಂಬರ್ 16 ರಂದು ಯುವತಿ ಕುಷ್ಟಗಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.
ನಾಪತ್ತೆಯಾದ ಬಗ್ಗೆ ಯುವತಿಯ ತಂದೆ ಕುಷ್ಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಯುವತಿ ಪತ್ತೆಗಾಗಿ ತನಿಖೆ ಆರಂಭಿಸಿದ್ದರು. ಬಳಿಕ ನಾಪತ್ತೆಯಾದ ಯುವತಿ ಹೈದರಾಬಾದ್ನಲ್ಲಿರುವ ವಿಷಯ ತಿಳಿಯುತ್ತದೆ. ಅಲ್ಲದೇ ಆ ಯುವತಿ ಅನ್ಯಕೋಮಿನ ವ್ಯಕ್ತಿ ಜೊತೆ ಮದುವೆಯಾಗಿರುವುದು ತಿಳಿದುಬಂದಿದೆ.
ನಂತರ ಪೊಲೀಸರು ಜೋಡಿಯನ್ನು ಕುಷ್ಟಗಿ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ನಾವು ವಯಸ್ಕರಾಗಿದ್ದು, ತಾನೇ ಒಪ್ಪಿಕೊಂಡು ಹುಡುಗನ ಧರ್ಮದ ಪ್ರಕಾರ ಮದುವೆಯಾಗಿರುವುದಾಗಿ ವಿಚಾರಣೆಯಲ್ಲಿ ತಿಳಿಸಿದ್ದಾಳೆ. ಹೆಚ್ಚಿನ ವಿಚಾರಣೆಗಾಗಿ ಜೋಡಿಯನ್ನು ತಾವರಗೆರಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ.. ಬಜರಂಗದಳದ ನಾಲ್ವರು ಕಾರ್ಯಕರ್ತರ ಬಂಧನ