ಕೊಪ್ಪಳ : ಕಳೆದ ವರ್ಷ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕರ್ತವ್ಯನಿರತ ಸಿಬ್ಬಂದಿ, ಅಶಕ್ತರಿಗೆ ಆಹಾರ ನೀರು ನೀಡಿ ಮೆಚ್ಚುಗೆ ಪಡೆದಿದ್ದ ರಾಜು ನಾಯಕ ವಾಲ್ಮೀಕಿ ಈಗ ಮತ್ತೆ ತಮ್ಮ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
ಜಿಲ್ಲೆಯ ಕುಕನೂರು ಪಟ್ಟಣದ ನಿವಾಸಿ ರಾಜು ನಾಯಕ ವಾಲ್ಮೀಕಿ ಅವರು ಕೊಪ್ಪಳ ನಗರದಲ್ಲಿ ಆಹಾರ, ನೀರು, ಹಣ್ಣು ವಿತರಿಸುವ ಕಾರ್ಯವನ್ನು ಕಳೆದೆರಡು ದಿನಗಳಿಂದ ಪ್ರಾರಂಭಿಸಿದ್ದಾರೆ.
ಕೊರೊನಾ ಎರಡನೇ ಅಲೆ ನಿಯಂತ್ರಣ ಮಾಡಲು ಸರ್ಕಾರ 14 ದಿನಗಳ ಕಾಲ ಕರ್ಫ್ಯೂ ಜಾರಿ ಮಾಡಿದೆ. ಈ ಹಿನ್ನೆಲೆ ನಗರದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಗೃಹರಕ್ಷಕದಳ, ಆರೋಗ್ಯ ಸಿಬ್ಬಂದಿ, ಮಾಧ್ಯಮದವರು ಮತ್ತು ಬಡವರಿಗೆ ಆಹಾರದ ಪೊಟ್ಟಣ, ನೀರಿನ ಬಾಟಲಿ, ಸೇಬು, ಬಾಳೆ ಹಣ್ಣು ವಿತರಿಸುತ್ತಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಜನರಿಗೆ ನಿತ್ಯವೂ ರಾಜು ನಾಯಕ ವಾಲ್ಮೀಕಿ ಅವರು ಈ ಸೇವೆಯನ್ನು ಮಾಡುತ್ತಿದ್ದಾರೆ. ಬಾಣಸಿಗರೊಬ್ಬರಿಂದ ಅಡುಗೆ ತಯಾಸಿಕೊಂಡು ತಮ್ಮ ಕಾರಿನಲ್ಲಿ ಆಹಾರ, ನೀರು, ಹಣ್ಣು ಇಟ್ಟುಕೊಂಡು ಹೋಗಿ ಹಂಚುತ್ತಾರೆ.
ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿಯೂ ಸಹ ಈ ಕಾರ್ಯವನ್ನು ಮಾಡಿ ಮೆಚ್ಚುಗೆ ಗಳಿಸಿದ್ದರು. ಈಗ ಮತ್ತೆ ತಮ್ಮ ಸೇವಾ ಕಾರ್ಯ ಪ್ರಾರಂಭಿಸಿದ್ದಾರೆ. ಅದೆಷ್ಟೋ ದಿನವಾದರೂ ಸಹ ಸೇವೆಯನ್ನು ಮುಂದುವರೆಸುತ್ತೇನೆ ಎನ್ನುತ್ತಾರೆ ರಾಜು ನಾಯಕ ವಾಲ್ಮೀಕಿ ಅವರು.