ಕೊಪ್ಪಳ: ಕಳೆದೊಂದು ತಿಂಗಳಿನಿಂದ ಚುನಾವಣಾ ಫಲಿತಾಂಶಕ್ಕಾಗಿ ಕಾದು ಕುಳಿತಿರುವ ಅಭ್ಯರ್ಥಿಗಳ ಹಾಗೂ ಜನರ ಕುತೂಹಲಕ್ಕೆ ಪೂರ್ಣವಿರಾಮ ಬೀಳಲಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಮತ ಎಣಿಕೆಗೆ ಕೊಪ್ಪಳ ಜಿಲ್ಲಾಡಳಿತ ಸಾಕಷ್ಟು ರೀತಿಯಲ್ಲಿ ಸಜ್ಜಾಗಿದೆ.
ಕಳೆದ ಎಪ್ರಿಲ್ 23 ರಂದು ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ಬರೆದು ಮತಯಂತ್ರದಲ್ಲಿ ಭದ್ರ ಪಡಿಸಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕರಡಿ ಸಂಗಣ್ಣ ಹಾಗೂ ಕಾಂಗ್ರೆಸ್ ಪಕ್ಷದಿಂದ ಕೆ. ರಾಜಶೇಖರ್ ಹಿಟ್ನಾಳ್ ಸೇರಿದಂತೆ ಒಟ್ಟು 14 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎಲ್ಲ ಅಭ್ಯರ್ಥಿಗಳ ಭವಿಷ್ಯ ಮಧ್ಯಾಹ್ನದ ವೇಳೆಗೆ ಹೊರಬೀಳಲಿದೆ. ಕ್ಷೇತ್ರದಲ್ಲಿನ ಒಟ್ಟು 17,38,118 ಮತದಾರರ ಪೈಕಿ 11,87,690 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರ ಜೊತೆಗೆ ಒಟ್ಟು 2,562 ಮತಗಳಿವೆ. ಕಳೆದ ಬಾರಿಗಿಂತ ಈ ಸಲ ಶೇಕಡಾ 2.1 ರಷ್ಟು ಮತದಾನ ಹೆಚ್ಚಾಗಿರುವುದರಿಂದ ವಿಜಯಲಕ್ಷ್ಮಿ ಯಾರ ಕೈ ಹಿಡಿಯುತ್ತಾಳೆ ಎಂಬ ಕುತೂಹಲ ಮೂಡಿಸಿದೆ.
ಮತ ಎಣಿಕೆ ಕಾರ್ಯ ನಡೆಯಲಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮತ ಎಣಿಕೆಗೆ ಸಕಲ ರೀತಿಯಿಂದ ಸಜ್ಜುಗೊಳಿಸಲಾಗಿದೆ. ಮತ ಎಣಿಕೆಗೆ 569 ಸಿಬ್ಬಂದಿಗಳು ನೇಮಕಗೊಂಡಿದ್ದಾರೆ. ಅಲ್ಲದೆ ಭದ್ರತೆಗೆ ಅರೆಸೇನಾ ಪಡೆಯ ಯೋಧರು ಸೇರಿದಂತೆ ಸುಮಾರು 2 ಸಾವಿರದಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮತ ಎಣಿಕೆ ದಿನವಾದ ಇಂದು ಗವಿಮಠದ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮತ ಎಣಿಕೆ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧ ಹೇರಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳು, ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆಯ ಏಜೆಂಟರು ಹಾಗೂ ಭದ್ರತಾ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಪತ್ರಗಳನ್ನು ಹೊಂದಿದವರು ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಒಟ್ಟಾರೆಯಾಗಿ ಮತದಾನದ ಬಳಿಕ ಬರೋಬ್ಬರಿ 1 ತಿಂಗಳ ಕಾಲ ರಿಸಲ್ಟ್ ಗಾಗಿ ಕಾಯುತ್ತಾ ಕುಳಿತಿರುವ ಅಭ್ಯರ್ಥಿಗಳಿಗೆ ಹಾಗೂ ಜನರಿಗೆ ಕೊಪ್ಪಳದ ಗದ್ದುಗೆ ಏರುವವರು ಯಾರು ಎಂಬ ಎಂಬುದು ತಿಳಿಯಲಿದೆ.