ಕೊಪ್ಪಳ: ಕೊಪ್ಪಳ ಲೋಕಸಭಾ ಚುನಾವಣೆ ರಂಗು ಪಡೆದುಕೊಂಡಿದ್ದು, ನಗರದಲ್ಲಿ ಬೃಹತ್ ಸಮಾವೇಶ ಹಾಗೂ ಮೆರವಣಿಗೆ ನಡೆಸುವ ಮೂಲಕ ಕಾಂಗ್ರೆಸ್ ಅಬ್ಬರಿಸಿದೆ.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ್ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್ ಸಮಾವೇಶ ನಡೆಸಿದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ರಣಕಹಳೆ ಊದಿದರು.
ತಮ್ಮ ಭಾಷಣದುದ್ದಕ್ಕೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಮೋದಿ ಈಡೇರಿಸಿಲ್ಲ. ಅವರ ಸಾಧನೆ ಎರಡೇ, ಒಂದು ಮನ್ ಕಿ ಬಾತ್ ಹಾಗೂ ಮತ್ತೊಂದು ವಿದೇಶಿ ಪ್ರವಾಸ. ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಅಕೌಂಟ್ಗೆ ಹಾಕ್ತಿನಿ ಎಂದು ಹೇಳಿದ್ದರು. 15 ಪೈಸಾ ಕೂಡ ಹಾಕಿಲ್ಲ, ಉದ್ಯೋಗ ಸೃಷ್ಠಿಸದ್ದಕ್ಕೆ ನಿರುದ್ಯೋಗ ತಾಂಡವವಾಡುತ್ತಿದೆ. ರೈತರಿಗೆ ಏನು ಯೋಜನೆ ಮಾಡಿದ್ದೀರಿ? ರೈತರ ಸಾಲಮನ್ನಾ ಮಾಡಿ ಎಂದು ನಾನು ಸಿಎಂ ಆಗಿದ್ದಾಗ ಪ್ರಧಾನಿ ಬಳಿ ಹೋಗಿ ಕೈಮುಗಿದು ಕೇಳಿದ್ದೆ. ಆದರೆ ಸಾಲಮನ್ನಾ ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದರು ಎಂದು ಹರಿಹಾಯ್ದರು.
ಇಂದು ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ರೈತರ 2 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತಿದ್ದಾರೆ. ಮಹಾನ್ ಸುಳ್ಳುಗಾರನಾಗಿರುವ ಮೋದಿ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು. ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ್ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್, ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವರಾದ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ, ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಸೇರಿದಂತೆ ಮೊದಲಾದವರು ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಸಿರಸಪ್ಪಯ್ಯಸ್ವಾಮಿ ಮಠದಿಂದ ಸಾರ್ವಜನಿಕ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.