ಕೊಪ್ಪಳ : ಬರೀ ಫ್ಲೆಕ್ಸ್‌ನಲ್ಲಿ ನೀರಾವರಿ ಯೋಜನೆಯ ನೀರು ಹರಿಸಿ ಎಲ್ಲ ನಾನೇ ಮಾಡಿದ್ದೀನಿ ಎಂದು ರೀಲ್ ಬಿಡುವುದನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಬಿಡಬೇಕು ಅಂತಾ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಕುಟುಕಿದ್ದಾರೆ.
ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರ ಹೆಸರು ಹೇಳದೆ ತಮ್ಮ ಮಾತಿನುದ್ದಕ್ಕೂ ಟೀಕಿಸಿದರು. ಈ ಹಿಂದೆ ಪಟ್ಟಣದಲ್ಲಿ ರಸ್ತೆ ಮಾಡಿದ್ದಾರೆ. ಅವೆಲ್ಲಾ ಈಗ ಕಿತ್ತು ಹೋಗಿವೆ. ಅದೆಂತಹ ಆಡಳಿತವೋ, ಅದೆಂತಹ ಕೆಲಸವೋ ಗೊತ್ತಿಲ್ಲ. ಆದರೆ, ನಾವು ಈಗ ಅವುಗಳನ್ನು ರಿಪೇರಿ ಮಾಡುವ ಅನಿವಾರ್ಯತೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸಬೇಕು. ಕೊಪ್ಪಳ ಏತ ನೀರಾವರಿ ಯೋಜನೆಗೆ ಸಿದ್ದರಾಮಯ್ಯರಿಂದ 2500 ಕೋಟಿ ರೂಪಾಯಿ ಎಂದು ಫ್ಲೆಕ್ಸ್‌ನಲ್ಲಿ ಹಾಕಿಸಿದರು. ಇದೆಲ್ಲವನ್ನೂ ಕ್ಷೇತ್ರದ ಜನರು ನೋಡಿದ್ದೀರಿ. ತಾಲೂಕಿನಲ್ಲಿ ನೀರಾವರಿಗೆ ಇವರ ಅವಧಿಯಲ್ಲಿ ಒಂದು ರೂಪಾಯಿ ಕೊಡಿಸಲು ಆಗಲಿಲ್ಲ. ಎಲ್ಲವನ್ನೂ ನಾನೇ ಮಾಡಿದೆ ಎಂದು ರೀಲು ಬಿಡಬೇಡಿ. ಮಾಡಿರುವ ಕೆಲಸದ ದಾಖಲೆ ನೀಡಿ ಹೇಳಿ ಎಂದ ಅವರು, ತಾಲೂಕಿನ ನೀರಾವರಿ ಯೋಜನೆ ಬರೀ ಫ್ಲೆಕ್ಸ್‌ನಲ್ಲಿ ಮಾಡಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರದ ಜನರು ನೀವು ನನಗೆ ಆಶೀರ್ವಾದ ಮಾಡಿದ್ದೀರಿ. ₹1700 ಕೋಟಿ ಅನುದಾನದಲ್ಲಿ ಕೊಪ್ಪಳ ಏತನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ. ಒಂದೂವರೆ ವರ್ಷದಲ್ಲಿ ತಾಲೂಕಿನ 24 ಕೆರೆಗಳನ್ನು ತುಂಬಿಸುವ ಕೆಲಸ ಮಾಡಿ ತೋರಿಸುತ್ತೇವೆ. ನಿಮಗೆ ಐಬಿಗಳು ಮಾತ್ರ ಬೇಕಾಗಿದ್ದವು. ನಿಮ್ಮ ಅನುಭವ, ವಯಸ್ಸು, ಜನರು ನಿಮ್ಮನ್ನು ಆಯ್ಕೆ ಮಾಡಿದ ಅವಧಿಗೆ ನೀವು ಅಪಚಾರ ಮಾಡಬೇಡಿ.
ಇವರು ಮುನಿರಾಬಾದ್ ಮೆಹಬೂಬನಗರ ರೈಲ್ವೆ ಯೋಜನೆ ಪ್ರಾರಂಭಿಸಿದರು. ಇದಕ್ಕೆ ಅಭಿನಂದಿಸುತ್ತೇನೆ. ಆದರೆ, ಮೂವತ್ತು ವರ್ಷವಾದರೂ ಈ ಯೋಜನೆ ಪ್ರಗತಿ ಕಾಣಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಂಧನೂರುವರೆಗೆ ರೈಲು ಮುಟ್ಟುವಂತೆ ಮಾಡಿದ್ದೇವೆ. ಎಲ್ಲವೂ ನಾನೇ ಮಾಡಿದ್ದೇನೆ ಎಂದು ರೀಲು ಬಿಡುವುದನ್ನು ಮಾಡಬೇಡಿ ಎಂದು ಕುಟುಕಿದರು.