ಗಂಗಾವತಿ: ಕಳೆದ ಮೂರೂವರೆ ದಶಕಗಳಿಂದ ಹಾರ್ಮೋನಿಯಂ ನುಡಿಸುವ ಮೂಲಕ ಕೊಪ್ಪಳ ಜಿಲ್ಲೆಯ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶಿಷ್ಟ ಸಾಧನೆ ಮಾಡಿದ್ದ ಹಿರಿಯ ಕಲಾವಿದ ಗೋವಿಂದರಾಜ ನಾರಾಯಣಪ್ಪ ಬೊಮ್ಮಲಾಪುರ (68) ನಿಧನ ಹೊಂದಿದ್ದಾರೆ.
ಕಳೆದ ಹಲವು ದಿನಗಳಿಂದ ಶ್ವಾಸ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಈ ಮಧ್ಯೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜಿಲ್ಲೆಯ ಸಂಗೀತ ಕ್ಷೇತ್ರಕ್ಕೆ ಬೊಮ್ಮಲಾಪುರ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದರು. ಕುಮಾರೇಶ್ವರ ಸಂಗೀತ ಮತ್ತು ಲಲಿತಕಲೆ ಎಂಬ ಸ್ವಂತ ಸಂಸ್ಥೆಯೊಂದನ್ನು ಕಟ್ಟಿಕೊಂಡು ಸಂಗೀತ ಕಛೇರಿಗಳನ್ನು ಆಯೋಜಿಸುವುದು ಸೇರಿದಂತೆ ಕೊಟ್ಟೂರೇಶ್ವರ ಸಂಗೀತ ಪಾಠ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡುವ ಮೂಲಕ ಗುರುತಿಸಿಕೊಂಡಿದ್ದರು. ನಗರದಲ್ಲಿ ನಡೆಯುತ್ತಿದ್ದ ಬಹುತೇಕ ಸಂಗೀತ ಕಾರ್ಯಕ್ರಮಗಳಿಗೆ ಬೊಮ್ಮಲಾಪುರ ಅವರ ಹಾರ್ಮೋನಿಯಂ ಸಾಥ್ ಇರುತಿತ್ತು. ಸದ್ಯ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಗೋವಿಂದರಾಜ ನಾರಾಯಣಪ್ಪ ಬೊಮ್ಮಲಾಪು ಅರವರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.