ಗಂಗಾವತಿ : ಕಾರಟಗಿ ತಹಶೀಲ್ದಾರ್ ಆಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ತಮ್ಮ ಕರ್ತವ್ಯದ ಮೂಲಕ ಜನರ ಗೌರವ ಪಡೆದಿದ್ದ ಕವಿತಾ ಆರ್ ಅವರ ದಿಢೀರ್ ವರ್ಗಾವಣೆ ಆಶ್ಚರ್ಯಕ್ಕೆ ಕಾರಣವಾಗಿದೆ.
ತಮ್ಮ ಆಡಳಿತ ಅವಧಿಯಲ್ಲಿ ಕವಿತಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಯತ್ನಿಸಿದ್ದರು. ಇದು ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ಕಾರಟಗಿ ತಾಲೂಕಿನ ನಂದಿಹಳ್ಳಿ, ಕಕ್ಕರಗೋಳ, ನವಲಿ ಭಾಗದಲ್ಲಿ ರಾಜಕಾರಣಿಗಳ ಬೆಂಬಲಿಗರಿಂದ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ಯತ್ನಕ್ಕೆ ಕೈಹಾಕಿದ್ದೆ ತಹಶೀಲ್ದಾರ್ ವರ್ಗಾವಣೆಗೆ ಕಾರಣ ಎಂದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಅಕ್ರಮ ಮರಳಿನ ವಾಹನಗಳ ಮೇಲೆ ಅಥವಾ ಅನಧಿಕೃತ ಚಟುವಟಿಕೆಗಳ ಮೇಲೆ ದಾಳಿ ಮಾಡಿದ ಕೂಡಲೇ ತಹಶೀಲ್ದಾರ್ಗೆ ಕೆಲ ರಾಜಕೀಯ ಮುಖಂಡರು ಕರೆ ಮಾಡಿ ಕ್ರಮ ಕೈಗೊಳ್ಳದಂತೆ ಒತ್ತಡ ಹೇರುತ್ತಿದ್ದರು. ಆದರೆ, ಇದಕ್ಕೆ ಕಿವಿಗೊಡದ ಹಿನ್ನೆಲೆ ವರ್ಗಾವಣೆಯಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.