ಕುಷ್ಟಗಿ(ಕೊಪ್ಪಳ): ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆಯಲ್ಲಿ ತಾಲೂಕಿನ ಇಬ್ಬರು ಅಭ್ಯರ್ಥಿಗಳಿಗೆ ಸಮನಾದ ಮತಗಳು ಬಿದ್ದಿದ್ದವು. ಈ ವೇಳೆ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಗೆದ್ದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು.
ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕಾ ಕಾರ್ಯ ನಡೆಯಿತು. ಈ ವೇಳೆ ತುಗ್ಗಲದೋಣಿ ಗ್ರಾ.ಪಂ ಮಿಟ್ಟಲಕೋಡ್ ಮತಕ್ಷೇತ್ರದ ರೇಖಾ ರಾಮನಗೌಡ ನೈನಾಪೂರ ಮತ್ತು ರೇಣುಕಾ ಮಲ್ಲಪ್ಪ ಭಂಡಾರಿ ಅವರಿಗೆ ತಲಾ 191 ಮತಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಇಬ್ಬರ ಸಮ್ಮುಖದಲ್ಲಿ ಚೀಟಿ ಎತ್ತುವ ಮೂಲಕ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು. ಈ ವೇಳೆ ರೇಣುಕಾ ಮಲ್ಲಪ್ಪ ಭಂಡಾರಿ ಅವರು ಗೆಲುವು ಪಡೆದರು.
ವಿಜೇತ ಅಭ್ಯರ್ಥಿಯ ಪತಿ ಮಲ್ಲಪ್ಪ ಭಂಡಾರಿ ಸರ್ಕಾರಿ ಪ್ರೌಢಶಾಲೆ ಕೊರಡಕೇರಾದಲ್ಲಿ ಶಿಕ್ಷಕರಾಗಿದ್ದು, ಮತ ಎಣಿಕೆಯಲ್ಲಿ ಅವರು ಸಹಎಣಿಕೆದಾರರಾಗಿ ಭಾಗವಹಿಸಿದ್ದರು. ಮತ ಎಣಿಕೆ ಕೇಂದ್ರದಿಂದ ಹೊರಗೆ ಬಂದಿದ್ದ ವೇಳೆ ಪರಾಜಿತ ಅಭ್ಯರ್ಥಿ ಪರ ಬೆಂಬಲಿಗರು ಪ್ರಶ್ನಿಸಿ ವಾಗ್ವಾದ ನಡೆಸಿ ಮರು ಎಣಿಕೆಗೆ ಆಗ್ರಹಿಸಿದರು. ಇದಕ್ಕೆ ಚುನಾವಣಾಧಿಕಾರಿಗಳು ಸಮ್ಮತಿಸದ ಹಿನ್ನೆಲೆಯಲ್ಲಿ ಪರಾಜಿತ ಬೆಂಬಲಿಗರು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ವಾದಿಸಿದರು.
ಕೊರೊನಾ ನಿಯಮ ಗಾಳಿಗೆ ತೋರಿದ ಜನತೆ:
ತಾಲೂಕಿನಲ್ಲಿ ನಡೆದ ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಆದರೂ ಫಲಿತಾಂಶ ತಿಳಿಯಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಗುರು ಭವನವರೆಗೂ ಜನಸಾಗರವೇ ನೆರೆದಿತ್ತು. ಅಷ್ಟೇ ಅಲ್ಲದೆ ಯಾವುದೇ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿರಲಿಲ್ಲ. ಈ ವೇಳೆ ಯುವಕನೋರ್ವ ಅಭ್ಯರ್ಥಿ ಪರ ಏಜೆಂಟ್ ಎಂದು ಹೇಳಿಕೊಂಡು ಮತ ಎಣಿಕಾ ಕೇಂದ್ರ ಪಕ್ಕ ನಿಂತುಕೊಂಡು ಮಾಹಿತಿ ಪಡೆಯುತ್ತಿದ್ದನು. ಇದನ್ನು ಗಮನಿಸಿದ ಮಹಿಳಾ ಪೊಲೀಸ್ ಯುವಕನನ್ನು ಹೊರ ಕಳುಹಿಸಿದರು.