ಗಂಗಾವತಿ: ವಿಶ್ವ ಪರಿಸರ ದಿನಾಚರಣೆ ಎಂದರೆ ಎಲ್ಲೆಡೆ ಗಿಡನೆಟ್ಟು ನೀರೆರೆದು ಪೋಷಣೆ ಮಾಡುವುದು, ಜಾಥಾ ಹಮ್ಮಿಕೊಳ್ಳುವುದು ಅಥವಾ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯಗಳನ್ನು ಸಂಘ-ಸಂಸ್ಥೆಗಳು ಹಮ್ಮಿಕೊಳ್ಳುವುದು ಸಹಜ. ಆದರೆ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಯುವಕರ ತಂಡವೊಂದು ಮಾದರಿ ಕಾರ್ಯಕ್ಕೆ ಕೈಹಾಕಿ ಗಮನ ಸೆಳೆದಿದೆ.
ಹೌದು ಗ್ರಾಮದಲ್ಲಿರುವ ಶತಮಾನಗಳಷ್ಟು ಹಳೆಯ ಮತ್ತು ದಶಕಗಳ ಕಾಲ ಗ್ರಾಮದ ನೀರಿನ ಕೊರತೆ ನೀಗಿಸಿದ್ದ ಬಾವಿಗಳ ಸ್ವಚ್ಛತೆಗೆ ಯುವಕರು ಪಣ ತೊಟ್ಟಿದ್ದಾರೆ. ತಾಲೂಕಿನ ಢಣಾಪುರ ಗ್ರಾಮದಲ್ಲಿರುವ ಹಸಿರು ಬಳಗ ಮತ್ತು ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ಎಂಬ ಯುವಕರ ತಂಡವೊಂದು ಗ್ರಾಮದಲ್ಲಿ ಈ ಹಿಂದೆ ಕುಡಿಯುವ ನೀರಿನ ಮುಖ್ಯ ಮೂಲಗಳಾಗಿದ್ದ ಮತ್ತು ದಶಕಗಳಷ್ಟು ಕಾಲ ಗ್ರಾಮದ ಜನರ ಕುಡಿಯುವ ನೀರಿನ ದಾಹ ನೀಗಿಸಿದ್ದ ಬಾವಿಗಳಿಗೆ ಕಾಯಕಲ್ಪ ನೀಡಲು ಮುಂದಾಗಿದೆ.
ಬಾವಿಯಲ್ಲಿನ ಕಸಕಡ್ಡಿಗಳನ್ನು ತೊಲಗಿಸಿ ಮತ್ತೆ ಬಾವಿಗೆ ನೈಸರ್ಗಿಕ ನೀರಿನ ಸೆಲೆಗಳನ್ನು ಹರಿಯುವಂತೆ ಮಾಡಲು ಗ್ರಾಮದ ಹಳೆಯ ಐದು ಭಾವಿಗಳ ಸ್ವಚ್ಛತೆಗೆ ಕೈ ಹಾಕುವ ಮೂಲಕ ಈ ತಂಡ ವಿಭಿನ್ನವಾಗಿ ಪರಿಸರ ದಿನಾಚರಣೆಗೆ ಇಳಿದಿದ್ದಾರೆ. ಗ್ರಾಮದ ದೇವಸ್ಥಾನ, ಸಾರ್ವಜನಿಕ ಸ್ಥಳದಲ್ಲಿನ ಐದು ಬಾವಿಗಳನ್ನು ಗುರುತಿಸಿರುವ ಈ ಹಸಿರು ಬಳಗ ಅವುಗಳ ಸ್ವಚ್ಛತೆಗೆ ಕಾರ್ಯ ಆರಂಭಿಸಿದೆ. ಆರಂಭದಲ್ಲಿ ಗ್ರಾಮದ ಬಸವಣ್ಣ ದೇವರ ಗುಡಿಯ ಆವರಣದಲ್ಲಿರುವ ಬಾವಿಯಲ್ಲಿನ ಕಸ ನಿವಾರಣೆ ಮಾಡಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕ್ಲೀನ್ ಅಂಡ್ ಗ್ರೀನ್ ಫೋರ್ಸ್ ತಂಡದ ಸಂಚಾಲಕ ಮೊಹಮ್ಮದ್ ರಫಿ, 'ಈ ಹಿಂದೆ ಬಾವಿಗಳು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿದ್ದವು. ಕಾಲಘಟ್ಟದಲ್ಲಿ ಬಾವಿಗೆ ಪರ್ಯಾಯವಾಗಿ ನೀರಿನ ಮೂಲಗಳು ಸುಲಭಕ್ಕೆ ಸಿಗುತ್ತಿರುವ ಕಾರಣಕ್ಕೆ ಇವು ಪಾಳು ಬಿದ್ದವು. ಅಂತರ್ಜಲ ವೃದ್ಧಿಗೆ ಆಧಾರವಾಗಿದ್ದ ಇವುಗಳ ಪುನಶ್ಚೇತನಕ್ಕೆ ಇದೀಗ ಸ್ವಚ್ಛತೆ ಮಾಡಲಾಗುತ್ತಿದೆ' ಎಂದು ರಫಿ ತಿಳಿಸಿದರು.
ಮಹಾನ್ ಕಿಡ್ಸ್ ಶಾಲೆಯ ಮಕ್ಕಳಿಗೆ ವಿಭಿನ್ನ ಪರಿಸರ ಪಾಠ: ಪರಿಸರ ದಿನಾಚರಣೆ ಸಂದರ್ಭದಲ್ಲಿ ಮಕ್ಕಳ ಕೈಯಲ್ಲಿ ಸಸಿ ನೆಡುವುದು, ಅವುಗಳ ರಕ್ಷಣೆ, ಪೋಷಣೆಯಂತವುಗಳ ಬಗ್ಗೆ ಮಾಹಿತಿ ನೀಡುವುದು ಸಹಜ. ಆದರೆ ಗಂಗಾವತಿ ಇಲ್ಲಿನ ಮಹಾನ್ ಕಿಡ್ ಎಂಬ ಶಾಲೆ, ಪ್ಲಾಸ್ಟಿಕ್ ಬಳಕೆ ಪೂರ್ಣ ನಿಯಂತ್ರಣಕ್ಕೆ ತರುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬಹುದು ಎಂದ ಸಂದೇಶ ಮಕ್ಕಳಿಗೆ ರವಾನಿಸಿದೆ.
ಇದರ ಭಾಗವಾಗಿ ಮಕ್ಕಳು ತಮ್ಮ ಮನೆಯಲ್ಲಿನ ಬಳಕೆಗೆ ಯೋಗ್ಯವಲ್ಲದ ಹಳೇಯ ಟೀ ಶರ್ಟ್ಗಳನ್ನು ಹೇಗೆ ಮಾರ್ಪಾಡು ಮಾಡಿ ಕೈ ಚೀಲಗಳನ್ನಾಗಿ ಪರಿವರ್ತಿಸಬಹುದು ಎಂಬುದರ ಬಗ್ಗೆ ಮಕ್ಕಳಿಗೆ ಶಾಲೆಯ ಶಿಕ್ಷಕರು ತಿಳಿವಳಿಕೆ ನೀಡಿದ್ದರು. ಪರಿಣಾಮ ನೂರಾರು ಮಕ್ಕಳು ತಮ್ಮ ಮನೆಯಲ್ಲಿನ ಬಳಕೆಗೆ ಯೋಗ್ಯವಲ್ಲದ ಹಳೆಯ ಟೀ ಶರ್ಟ್ಗಳನ್ನು ಕೈ ಚೀಲಗಳನ್ನಾಗಿ ಪರಿವರ್ತಿಸಿಕೊಂಡು ಬಣ್ಣ ಬಣ್ಣದ ಕೈ ಚೀಲಗಳನ್ನು ತಯಾರಿಸಿಕೊಂಡು ಶಾಲೆಗೆ ತಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರದರ್ಶಿಸಿ ಗಮನ ಸೆಳೆದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾನ್ ಕಿಡ್ಸ್ ಶಾಲೆಯ ಮುಖ್ಯಸ್ಥ ನೇತ್ರಾಜ್ ಗುರುವಿನ್ ಮಠ, 'ಸಮಾಜಕ್ಕೆ ರವಾನಿಸುವ ಸಂದೇಶಕ್ಕಿಂತ ಮಕ್ಕಳಲ್ಲಿ ಪರಿಸರದ ಬಗ್ಗೆ ಹೆಚ್ಚು ತಿಳಿವಳಿಕೆ ಮೂಡಿಸುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶಾಲೆಯಲ್ಲಿ ಹೇಳುವ ಪ್ರತಿಯೊಂದು ಅಂಶಗಳನ್ನು ಮಕ್ಕಳು ಚಾಚೂ ತಪ್ಪದೇ ಪಾಲಿಸುತ್ತಾರೆ. ಅಲ್ಲದೇ ಅನುಷ್ಠಾನಕ್ಕೂ ತರುತ್ತಾರೆ. ಪಾಲಕರಿಗೆ ಮನವೊಲಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಮಕ್ಕಳಲ್ಲಿ ಮೊದಲಿಗೆ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧದಂತ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ' ಎಂದರು.
ಇದನ್ನೂ ಓದಿ: ನವವೃಂದಾವನ ಗಡ್ಡೆ: ಉತ್ತರಾಧಿ ಮಠಕ್ಕೆ ಆರಾಧನೆಗೆ ಹೈಕೋರ್ಟ್ ಅಸ್ತು