ಕೊಪ್ಪಳ: ದೀಪಾವಳಿ ಅಂದ್ರೆ ಅದು ಬೆಳಕಿನ ಹಬ್ಬ. ಮನದ ಅಂಧಕಾರವನ್ನು ಕಳೆದು ಬೆಳಕು ಹರಡುವ ಸಂಕಲ್ಪದ ಹಬ್ಬ. ಹೀಗಾಗಿ ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬ ಮಾಡಲಾಗುತ್ತದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಮಾರ್ಕೆಟ್‍ನಲ್ಲಿ ಪರಿಸರಕ್ಕೆ ಮಾರಕವಾಗುವ ಹಲವು ಬಗೆಯ ದೀಪಗಳು, ಪಟಾಕಿಗಳು ರಾರಾಜಿಸುತ್ತವೆ. ಪಟಾಕಿ ಬಳಕೆ ಮಾಡದಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಪರಿಸರಕ್ಕೆ ಪೂರಕವಾಗಿರುವ ದೀಪಗಳನ್ನು ಬಳಕೆ ಮಾಡಬೇಕು ಎಂಬುದು ಇದರ ಹೂರಣ. ಇದಕ್ಕೆ ಪೂರಕವೆಂಬಂತೆ ಇಲ್ಲೊಂದು ಕುಟುಂಬ ಅಪ್ಪಟ ಪರಿಸರ ಪೂರಕವಾದ ದೀಪಗಳನ್ನು ಹಾಗೂ ಧೂಪಗಳನ್ನು ರೆಡಿ ಮಾಡಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದ ಶ್ರೀನಿವಾಸ ದಿವಾಕರ ದಂಪತಿ ಸ್ವದೇಶಿ, ಸ್ವಾವಲಂಬಿ ಮಂತ್ರ ಜಪಿಸಿ ದೀಪ ಹಾಗೂ ಧೂಪಗಳನ್ನು ತಯಾರಿಸಿದ್ದಾರೆ. ಮೂಲತಃ ಕೃಷಿಕರಾಗಿರುವ ಶ್ರೀನಿವಾಸ ದಿವಾಕರ ದಂಪತಿ ಹಸುವಿನ ಸಗಣಿ ಬಳಸಿಕೊಂಡು ದೀಪಾವಳಿಗಾಗಿ ಈ ದೀಪಗಳನ್ನು ತಯಾರಿಸಿದ್ದಾರೆ. ಸಗಣಿ, ಪ್ರಿಮಿಕ್ಸ್ (ಜಿಗುಟು ಬರಲು ಚವಳಿಕಾಯಿ, ಹುಣಸೆಬೀಜ ಪುಡಿ ಸೇರಿಸಿ ಮಾಡುವ ಪದಾರ್ಥ)ನೊಂದಿಗೆ ಸೇರಿಸಿಕೊಂಡು ದೀಪ ಮಾಡುತ್ತಾರೆ. ಅಲ್ಲದೆ ಈ ದೀಪಗಳು ಆಕರ್ಷಕವಾಗಿ ಕಾಣಲು ಓಂ, ಸ್ವಸ್ತಿಕ್ ಹಾಗೂ ಶ್ರೀ ಎಂದು ಬರೆದು ದೀಪಗಳಿಗೆ ಆಕರ್ಷಕ ಬಣ್ಣಗಳನ್ನ ಹಚ್ಚಲಾಗಿದೆ. ಹೀಗಾಗಿ ಇವು ಒಂದೇ ಬಾರಿ ಉಪಯೋಗಿಸಬಹುದಾದ ಪರಿಸರಸ್ನೇಹಿ ದೀಪಗಳಾಗಿದ್ದು, ನೋಡಲು ಆಕರ್ಷಕವಾಗಿವೆ.
ಇನ್ನು ಇವರು ಆಕಳ ಸಗಣಿಯನ್ನು ಬಳಸಿಕೊಂಡು ಧೂಪವನ್ನು ಸಹ ತಯಾರಿಸಿದ್ದಾರೆ. ಶುದ್ಧ ಆಕಳಿನ ತುಪ್ಪ, ಕೊಬ್ಬರಿಎಣ್ಣೆ, ಕರ್ಪೂರ, ಗುಗ್ಗಳ, ಸಾವಯವ ಅರಿಶಿಣ, ಲವಂಗವನ್ನು ಈ ಆಕಳ ಸಗಣಿಯ ಧೂಪ ತಯಾರಿಕೆಯಲ್ಲಿ ಬಳಸಿಕೊಂಡಿದ್ದಾರೆ. ಮನೆಯಲ್ಲಿ ಮೊದಲು ಬಳಕೆ ಮಾಡಲು ಈ ರೀತಿಯಾದ ಧೂವನ್ನು ತಯಾರಿಸಿಕೊಂಡಿದ್ದರು. ಈ ಧೂಪವನ್ನು ಮನೆಯಲ್ಲಿ ಹಚ್ಚುವುದರಿಂದ ಶಾಂತಿ, ನೆಮ್ಮದಿಯ ಭಾವ ಮೂಡುತ್ತದೆ. ಮನೆಗಷ್ಟೇ ಅಲ್ಲದೆ ಈಗ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿ ಯಾಕೆ ಮಾರಾಟ ಮಾಡಬಾರದು ಎಂಬ ಆಲೋಚನೆ ಬಂದಾಗ ಈ ದಂಪತಿ ಹೆಚ್ಚಿನ ಸಂಖ್ಯೆಯಲ್ಲಿ ಆಕಳು ಸಗಣಿಯ ದೀಪ ಮತ್ತು ಧೂಪ ತಯಾರು ಮಾಡಲು ಮುಂದಾಗಿದ್ದಾರೆ.
ಆಕಳಿನ ಗೋಮಯದಿಂದ ದೀಪ-ಧೂಪ ತಯಾರಿಸುವುದನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿದುಕೊಂಡು ಇತ್ತೀಚೆಗೆ ದೀಪ ಮಾಡುವುದನ್ನು ಈ ದಂಪತಿ ಆರಂಭಿಸಿದ್ದಾರೆ. ನಾಗಪುರದ ಸ್ವಾನಂದ ಗೋವಿಜ್ಞಾನ ಕೇಂದ್ರದಿಂದ ದೀಪದ ಅಚ್ಚು ತರಿಸಿಕೊಂಡಿದ್ದಾರೆ. ಈಗಾಗಲೇ ಸುಮಾರು 6 ಸಾವಿರ ಗೋಮಯದ ದೀಪಗಳನ್ನು ಮಾಡಿದ್ದಾರೆ. ಒಂದು ದೀಪಕ್ಕೆ ಐದು ರುಪಾಯಿಯಂತೆ ಅವರು ಮಾರಾಟ ಮಾಡುತ್ತಿದ್ದಾರೆ. ಇನ್ನು ಎರಡು ಇಂಚು ಉದ್ದ ಹಾಗೂ ಅರ್ಧ ಇಂಚು ವ್ಯಾಸ ಹೊಂದಿರುವ 32 ಧೂಪಕ್ಕೆ 100 ರುಪಾಯಿ ನಿಗದಿ ಮಾಡಿದ್ದಾರೆ. ಪರಿಸರಕ್ಕೆ ಪೂರಕವಲ್ಲದ ವಸ್ತುಗಳ ಬಳಕೆಯನ್ನು ತ್ಯಜಿಸಬೇಕು ಎಂಬ ಉದ್ದೇಶದಿಂದ ಈ ಸ್ವದೇಶಿ ಸ್ವಾವಲಂಬನೆಯ ಸಂಕಲ್ಪದೊಂದಿಗೆ ಗೋಮಯದ ದೀಪ ಹಾಗೂ ಧೂಪದ ತಯಾರಿ ಮಾಡುತ್ತಿದ್ದೇವೆ ಎಂದು ಶ್ರೀನಿವಾಸ್ ದಿವಾಕರ್ ತಿಳಿಸಿದ್ದಾರೆ.