ಕೊಪ್ಪಳ: ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.
ಕೆಲವೆಡೆ ಬೆಳಗ್ಗೆಯೇ ನೀರಿಗಾಗಿ ಜನ ಗುಂಪು ಗುಂಪಾಗಿ ನಿಲ್ಲುವುದು ಸಾಮಾನ್ಯವಾಗಿದೆ. ಕೊರೊನಾ ಭೀತಿ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಜೀವಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ ಈ ಸಮಸ್ಯೆ ಕೊರೊನಾ ಗದ್ದಲದ ನಡುವೆ ಮರೆಯಾಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಹೇಳಿದರೂ ಪ್ರಯೋಜನವಿಲ್ಲ ಎಂಬ ಮನಸ್ಥಿತಿಗೆ ಜನ ಬಂದಿದ್ದಾರೆ. ನಿತ್ಯದ ಬದುಕಿಗೆ ನೀರು ಬೇಕೇಬೇಕು. ಹೀಗಾಗಿ, ಸಾರ್ವಜನಿಕ ನಲ್ಲಿಗಳಲ್ಲಿ ಬರುವ ಕುಡಿಯುವ ನೀರು ಹಿಡಿಯಲು ನಾ ಮುಂದು ತಾ ಮುಂದು ಎಂದು ಕೆಲ ಗ್ರಾಮಗಳಲ್ಲಿ ಗುಂಪು ಸೇರುತ್ತಿದ್ದಾರೆ.
ಸಾಮಾಜಿಕ ಅಂತರ ಮರೆತು ಕುಡಿಯುವ ನೀರು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ತಾಲೂಕಿನ ಬಹದ್ದೂರಬಂಡಿ, ಯಲಬುರ್ಗಾದ ಮಂಗಳೂರು, ಹಿರೇಅರಳಿಹಳ್ಳಿ, ಚಿಕ್ಕಬನ್ನಿಗೋಳ ತಾಂಡಾ, ಜಿ. ವೀರಾಪುರ ಹಾಗೂ ಹುಲೆಗುಡ್ಡ ಸೇರಿ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಯಲಬುರ್ಗಾ ತಾಲೂಕಿನ ಕೆಲ ಗ್ರಾಮಗಳಿಗೆ ಶಾಸಕ ಹಾಲಪ್ಪ ಆಚಾರ್ ಅವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ.