ಕುಷ್ಟಗಿ (ಕೊಪ್ಪಳ): ಮುಂಗಾರು ಹಂಗಾಮಿಗೆ ತಾಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ಹೆಸರು ಕಾಳು ಬಿತ್ತನೆಗೆ ಸಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿಗೆ 2.4 ಟನ್ ಬಿಜಿಎಸ್-ಆರ್ ತಳಿಯ ಹೆಸರು ಬಿತ್ತನೆ ಬೀಜ ಪೂರೈಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ 5 ಕೆಜಿ ಪಾಕೇಟ್ಗೆ 487.50 ರೂ. ಪೂರ್ಣ ದರವಿದ್ದು, ಸಬ್ಸಿಡಿ ದರದಲ್ಲಿ ಸಾಮಾನ್ಯ ರೈತರಿಗೆ 362.50 ರೂ., ಎಸ್ಸಿ-ಎಸ್ಟಿ ವರ್ಗದ ರೈತರಿಗೆ 300 ರೂ. ದರದಂತೆ ತಾಲೂಕಿನ ಕುಷ್ಟಗಿ, ಹನುಮಸಾಗರ, ತಾವರಗೇರಾ, ಹನುಮನಾಳ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಿಜಿಎಸ್-ಆರ್ ತಳಿಯ ಬಿತ್ತನೆಯ ಬೀಜಗಳನ್ನು ಭಾರತೀಯ ಬೀಜ ನಿಗಮ, ಕೆಓಎಫ್, ಮೂಲಕ ಮೊದಲ ಆದ್ಯತೆಯಾಗಿ ವಿತರಿಸಲಾಗುತ್ತಿದೆ. ಹೆಸರು ಬೇಳೆ 75 ದಿನದ ಬೆಳೆಯಾಗಿದ್ದು, ಈ ಮಳೆಗೆ ಬಿತ್ತನೆ ಕೈಗೊಂಡರೆ ಹಳದಿ ರೋಗ ಮುಕ್ತವಾಗಲಿದ್ದು, ಇಳುವರಿ ಉತ್ತಮವಾಗಲಿದೆ. ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮಳೆಯಾಗಿಲ್ಲ, ಅಲ್ಲಲ್ಲಿ ಮಳೆಯಾಗಿದೆ. ರೈತರು ಭೂಮಿಯನ್ನು ಹದ ಮಾಡಿಟ್ಟುಕೊಳ್ಳಲು ಅನುಕೂಲವಾಗಲಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಾಲಪ್ಪ ಜಲಗೇರಿ ಮಾಹಿತಿ ನೀಡಿದರು.