ಗಂಗಾವತಿ: ನಗರದಲ್ಲಿ ಆಧಾರ್ ಕಾರ್ಡ್ನಲ್ಲಿನ ತಿದ್ದುಪಡಿಗಾಗಿ ಜನ ಇಡೀ ದಿನ ಕೇಂದ್ರದ ಮುಂದೆ ಸರದಿ ಸಾಲಿನಲ್ಲಿ ನಿಂತು ಕಷ್ಟಪಡುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್, ಜು.13 ರಿಂದ ಹೆಚ್ಚುವರಿ ಆಧಾರ್ ಕೇಂದ್ರಗಳ ಆರಂಭಕ್ಕೆ ಸೂಚನೆ ನೀಡಿದ್ದಾರೆ.
ನಗರದ 35 ವಾರ್ಡ್ಗಳಿಗೆ ಕೇವಲ ಒಂದು ಆಧಾರ್ ತಿದ್ದುಪಡಿ ಕೇಂದ್ರವಿದ್ದು, ನಿತ್ಯ 15 ರಿಂದ 20 ಟೋಕನ್ ಮಾತ್ರ ನೀಡಲಾಗುತ್ತಿದೆ. ಈ ಹಿನ್ನೆಲೆ ಜನ ತಮ್ಮ ದೈನಂದಿನ ಕಾರ್ಯಗಳನ್ನು ಬದಿಗಿಟ್ಟು ಕೇವಲ ಆಧಾರ್ ಕಾರ್ಡ್ನಲ್ಲಿನ ತಿದ್ದುಪಡಿಗಾಗಿ ಇಡೀ ದಿನ ಕಾದು ಕೂರುವ ಸ್ಥಿತಿ ಇದೆ.
ಇನ್ನು ಗ್ರಾಮೀಣ ಭಾಗದಲ್ಲಿ ಆಧಾರ್ ಕಾರ್ಡ್ನಲ್ಲಿನ ತಿದ್ದುಪಡಿಗೆ ಅವಕಾಶವೇ ಇಲ್ಲದಂತಾಗಿದೆ. ಈ ಬಗ್ಗೆ ಈಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್, ಸೋಮವಾರದಿಂದ ಹೆಚ್ಚುವರಿ ಕೇಂದ್ರ ಆರಂಭಕ್ಕೆ ಸೂಚಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಜನರ ಸಂಕಷ್ಟ ಗಮನಕ್ಕೆ ಬಂದಿದ್ದು, ಕೂಡಲೇ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಿ ತಿದ್ದುಪಡಿಗೆ ಅವಕಾಶ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದ್ದು, ಜು.13 ರಿಂದ ಗಂಗಾವತಿ ನಗರ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಆಧಾರ್ ಕೇಂದ್ರ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿಗಳು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.