ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಾಧ್ಯತೆಗಳಿದ್ದು, ನೆರೆ ಉಂಟಾಗಿ ವಿಪತ್ತಿನ ಸಂಕಷ್ಟ ಎದುರಾಗಬಹುದು. ಯಾವುದೇ ಸಂದರ್ಭ ಬಂದರೂ ಎದುರಿಸಲು ಇಲಾಖೆಯ ಅಧಿಕಾರಿಗಳು ಸಿದ್ಧರಿರಬೇಕು ಎಂದು ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹೇಳಿದರು.
ನಗರದ ಮಂಥನ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನದಿಪಾತ್ರದಲ್ಲಿನ ಗ್ರಾಮಗಳಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಂಬಂಧಿತ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಬೇಕು. ಈಗಾಗಲೇ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದೆ. ಯಾವುದೇ ಸಂದಿಗ್ಧ ಸಂದರ್ಭ ಎದುರಾದರೂ ಜನರನ್ನು ಸ್ಥಳಾಂತರ ಮಾಡುವುದು, ಗಂಜಿಕೇಂದ್ರ ತೆರೆಯುವುದು, ಜಾನುವಾರುಗಳಿಗೆ ಮೇವು ಮತ್ತು ಲಸಿಕೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ವಿಪತ್ತಿನಂತಹ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳ ಮಧ್ಯೆ ಸಮನ್ವಯ ಮುಖ್ಯವಾಗಿದೆ. ಯಾವುದೇ ಅಧಿಕಾರಿಗಳು ಜವಾಬ್ದಾರಿಯಿಂದ ವಿಮುಖರಾಗಬಾರದು. ನೆರೆ ನಿರ್ವಹಣೆಯ ಉದ್ದೇಶಕ್ಕಾಗಿಯೇ ವಾಟ್ಸ್ ಪ್ ಗ್ರೂಪ್ ರಚಿಸಲಾಗಿದ್ದು, ಮಾಹಿತಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.