ಗಂಗಾವತಿ : ಕನಕಗಿರಿ ಶಾಸಕ ಬಸವರಾಜ ದಢೇಸ್ಗೂರು ಶಕುನಿ ಇದ್ದಂತೆ. ಸಮಯ ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಮೂಲಕ ರೈತರ ಮಧ್ಯೆಯೇ ಕಿಡಿ ಹಚ್ಚಿಟ್ಟು, ವೋಟ್ ಬ್ಯಾಂಕ್ ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ದೊಡ್ಡಪ್ಪ ದೇಸಾಯಿ, ಸರ್ಕಾರ ನಿಮ್ಮದೆ ಆಗಿದೆ, ಆಡಳಿತದಲ್ಲಿ ಇರುವವರು ಸಹ ನೀವೇ.. ಸಿಎಂ ಬಳಿ ತೆರಳಿ ಅಕ್ರಮ ಪೈಪ್‌ಲೈನ್ ತೆರವಿಗೆ ಸಚಿವ ಜಾರಕಿಹೊಳಿ ಮೂಲಕ ಆದೇಶ ಮಾಡಿಸಿದ್ದು ನೀವೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರೈತರೊಂದಿಗೆ ಕೂಡಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ಶಾಸಕ ಡಬಲ್ ಗೇಮ್ ಆಡುತ್ತಿದ್ದಾರೆ. ಅತ್ತ ಸರ್ಕಾರದಲ್ಲಿ ತಮಗೆ ಬೇಕಾದಂತೆ ಆದೇಶ ಮಾಡಿಸುವುದು, ಇಲ್ಲಿ ರೈತರೊಂದಿಗೆ ಸೇರಿ ಪ್ರತಿಭಟನೆಯ ನಾಟಕ ಆಡುವುದು ಶಾಸಕರಾದವರಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು.
ಒಂದು ಕಡೆ ಸರ್ಕಾರದಿಂದ ಆದೇಶ ಮಾಡಿಸುವುದು, ಮತ್ತೊಂದು ಕಡೆ ರೈತರೊಂದಿಗೆ ಸೇರಿ ಪ್ರತಿಭಟನೆ ಮಾಡುವ ಮೂಲಕ ಶಾಸಕರು ಶಕುನಿಯ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ದೇಸಾಯಿ, ಇಂತಹ ನಾಟಕವು ಕ್ಷೇತ್ರದಲ್ಲಿ ಬಹಳ ದಿನ ನಡೆಯಲ್ಲ ಎಂದರು.