ಕೊಪ್ಪಳ: ಜಿಲ್ಲೆಯ ಬಿಸಿಎಂ ಹಾಸ್ಟೆಲ್ನಲ್ಲಿ ವಿದ್ಯುತ್ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಾಗಾರದ ಬಳಿ ಪೊಲೀಸರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರಗತಿಪರ ಸಂಘಟನೆಗಳ ಮುಖಂಡರಾದ ಬಸವರಾಜ ಶೀಲವಂತರ ಹಾಗೂ ಡಿ.ಹೆಚ್.ಪೂಜಾರ ಘಟನೆ ಹಿನ್ನೆಲೆಯಲ್ಲಿ ಶವಾಗಾರದ ಬಳಿ ಬಂದಿದ್ದರು. ಅಮಾಯಕ ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಮೃತ ವಿದ್ಯಾರ್ಥಿಗಳ ಪ್ರತಿ ಕುಟುಂಬಕ್ಕೆ ತಲಾ ₹ 20 ಲಕ್ಷ ಪರಿಹಾರ ಹಾಗೂ ಸರ್ಕಾರಿ ಕೆಲಸ ಕೊಡಬೇಕು. ಅಲ್ಲಿಯವರೆಗೂ ಶವಗಳನ್ನು ಸಾಗಿಸಬೇಡಿ ಎಂದು ತಾಕೀತು ಮಾಡಿದರು.
ಆ ಹೊತ್ತಿಗಾಗಲೇ ಮೃತ ವಿದ್ಯಾರ್ಥಿಗಳ ಪಾಲಕರ ಮನವೊಲಿಸಿ ಶವಗಳನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಂಸದ ಸಂಗಣ್ಣ ಕರಡಿ ಅವರ ಬಳಿ ಪ್ರಗತಿಪರ ಮುಖಂಡರು ಈ ವಿಚಾರಗಳೊಂದಿಗೆ ಒತ್ತಾಯಿಸುತ್ತಿದ್ರು. ಸಿಎಂ ಈಗಾಗಲೇ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರಿಗೆ ಸಂಸದ ಸಂಗಣ್ಣ ಕರಡಿ ಮನವರಿಕೆ ಮಾಡಿದರು.