ಗಂಗಾವತಿ: ತಾಲೂಕಿನ ವೆಂಕಟಗಿರಿ ಸಮೀಪದ ಕ್ರಷರ್ ಮತ್ತು ಕಲ್ಲು ಕ್ವಾರಿಯಲ್ಲಿ ಇತ್ತೀಚೆಗೆ ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನೆಲೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕೆಲ ಕ್ರಷರ್ ಮಾಲೀಕರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಬ್ಲಾಸ್ಟ್ ಮಾಡುತ್ತಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಜೊತೆಗೆ ಬೋರ್ ಬ್ಲಾಸ್ಟ್ ಮಾಡಿಸುವ ಸಂದರ್ಭದಲ್ಲಿ ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೀರಿ, ಎಷ್ಟು ಜನ ಬೋರ್ ಬ್ಲಾಸ್ಟ್ಗೆ ಸಂಬಂಧಿಸಿದ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕೆಲ ಮಾಲೀಕರು ಮಾಹಿತಿ ನೀಡಲು ತಡವರಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಸಾರ್ವಜನಿಕರ ದೂರಿನ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಯಾವೆಲ್ಲಾ ಕ್ರಷರ್ ಘಟಕಗಳು ಅಧಿಕೃತ ಅನುಮತಿ ಪಡೆದುಕೊಂಡಿವೆ ಎಂಬುವುದರ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದರು.