ಕೊಪ್ಪಳ : ದಕ್ಷಿಣ ಭಾರತದ ಮಹಾಕುಂಭಮೇಳ ಎಂಬ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಈ ಬಾರಿಯ ಜಾತ್ರೆ ಕುರಿತು ಯಾವುದೇ ಸ್ಪಷ್ಟ ನಿರ್ಧಾರ ಮಠದಿಂದ ಇನ್ನೂ ಹೊರಬೀಳದಿರುವುದು ಭಕ್ತರ ಗೊಂದಲಕ್ಕೆ ಕಾರಣವಾಗಿದೆ.
ದಕ್ಷಿಣ ಭಾರತದ ಮಹಾಕುಂಭಮೇಳ:
ಹೊಟ್ಟೆ ಹಸಿದವರಿಗೆ ಅನ್ನ, ನೆತ್ತಿ ಹಸಿದವರಿಗೆ ಜ್ಞಾನ ಹಾಗೂ ಅಧ್ಯಾತ್ಮದ ಹಸಿವುಳ್ಳವರಿಗೆ ಅಧ್ಯಾತ್ಮ ಸೇರಿದಂತೆ ತ್ರಿವಿಧ ದಾಸೋಹದ ಮೂಲಕ ಗವಿಮಠ ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿಯ ತಾಣವಾಗಿ ನೆಲೆಗೊಂಡಿದೆ. ಇಂತಹ ಗವಿಮಠದ ಜಾತ್ರೆ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಂಗೀತ, ಕಲೆ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಒಂದು ಉತ್ಸವದ ಮಾದರಿಯಲ್ಲಿ ಹಾಗೂ ಬರುವ ಭಕ್ತರಿಗೆ ಉತ್ತರ ಕರ್ನಾಟಕ ಶೈಲಿಯ ಪುಷ್ಕಳ ಪ್ರಸಾದ ಬಡಿಸುವ ಮೂಲಕ ದಕ್ಷಿಣ ಭಾರತದ ಮಹಾಕುಂಭಮೇಳ ಎಂಬ ಖ್ಯಾತಿ ಪಡೆದಿದೆ.
ಜಾತ್ರೆ ಕುರಿತು ಭಕ್ತರಲ್ಲಿ ಗೊಂದಲ:
ಜಾತ್ರೆಗೆ ಈಗ ಕೊರೊನಾ ಕರಿನೆರಳು ಬೀಳುವ ಸಾಧ್ಯತೆ ಇದ್ದು, ಈ ಬಾರಿಯ ಜಾತ್ರೆ ನಡೆಯುತ್ತದೆಯೋ, ಇಲ್ಲವೋ ಎಂಬ ಗೊಂದಲ ಮುಂದುವರೆದಿದೆ. ಮುಂದಿನ ಜನವರಿ ತಿಂಗಳ ಕೊನೆಯ ವಾರದಲ್ಲಿ ಈ ಬಾರಿಯ ಜಾತ್ರೆ ಬರುತ್ತದೆ. ಆದರೆ ಜಾತ್ರೆ ನಡೆಸುವ ಕುರಿತಂತೆ ಮಠದಿಂದ ಇನ್ನೂ ಯಾವುದೇ ರೀತಿಯ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ. ಈ ಹಿಂದೆ ಒಂದೂವರೆ ತಿಂಗಳ ಮುಂಚೆಯೇ ಜಾತ್ರೆಯ ತಯಾರಿಯ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದವು. ಆದರೆ ಈ ಬಾರಿ ಅಂತಹ ಯಾವುದೇ ಪೂರ್ವ ತಯಾರಿ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ.
ಇದನ್ನೂ ಓದಿ : ಕೊಪ್ಪಳದಲ್ಲಿ ಚುನಾವಣೆ ದಿನ ಜಾತ್ರೆ, ಸಂತೆ ಮಾಡುವಂತಿಲ್ಲ: ಡಿಸಿ ಆದೇಶ
ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಕೊರೊನಾ ಹಿನ್ನೆಲೆ ಜಾತ್ರೆಗೆ ಜಿಲ್ಲಾಡಳಿತ ಇನ್ನೂ ಅನುಮತಿ ನೀಡಿಲ್ಲ. ಕೇವಲ ಗವಿಮಠ ಜಾತ್ರೆಯಷ್ಟೇ ಅಲ್ಲ. ದೊಡ್ಡ ಸಂಖ್ಯೆಯಯಲ್ಲಿ ಜನ ಸೇರುವ ಯಾವುದೇ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಮುಂದಿನ ಆದೇಶ ಬರುವವರೆಗೂ ಅನುಮತಿ ನೀಡುವುದೂ ಇಲ್ಲ. ಆದರೆ ಸೀಮಿತ ಜನರು ಸೇರಿಕೊಂಡು ಧಾರ್ಮಿಕ ಆಚರಣೆಗಳನ್ನು ಮಾಡಬಹುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.