ಕೊಪ್ಪಳ : ಯುವರಾಜ ವಂಚನೆ ಪ್ರಕರಣ ತನಿಖೆಯಾಗುತ್ತಿದೆ. ಸೂಕ್ತ ಸಮಯದಲ್ಲಿ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ತಾಲೂಕಿನ ಬಸಾಪುರ ಬಳಿಯ ಖಾಸಗಿ ಏರ್ಪೋರ್ಟ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಂಚನೆ ಪ್ರಕರಣದ ಆರೋಪಿ ಯುವರಾಜ ಜೊತೆಗೆ ಬಿಜೆಪಿಯ ಹಲವು ಶಾಸಕರ ಹಾಗೂ ಸಚಿವ ವಿ ಸೋಮಣ್ಣ ಅವರ ಫೋಟೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
ಯಾರ ಜೊತೆಗೋ ಫೋಟೋ ಇದ್ದಾಕ್ಷಣ ಅಪರಾಧವಾಗೋದಿಲ್ಲ. ಏನು ಎತ್ತ ಎಂದು ಹಿನ್ನೆಲೆ ಗೊತ್ತಾಗಬೇಕು. ವಿವರವಾದ ಮಾಹಿತಿ ಸಿಕ್ಕ ಬಳಿಕ ನೋಡೋಣ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟವರು ಸೂಕ್ತ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಇನ್ನು, ಕಲ್ಯಾಣ ಕರ್ನಾಟಕಕ್ಕೆ ಅನುದಾನ ಕಡಿಮೆಯಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕೋವಿಡ್ ಮತ್ತು ಅತಿವೃಷ್ಟಿ, ಬರಗಾಲದಿಂದ ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ. ಬೇರೆ ಬೇರೆ ಕಾರಣಕ್ಕೆ ನಿರೀಕ್ಷೆಯಂತೆ ಕೆಲಸ ಮಾಡೋದಕ್ಕೆ ಆಗಿಲ್ಲ. ಈ ವರ್ಷ ಬಜೆಟ್ನಲ್ಲಿಯೂ ಸಹ 30 ರಿಂದ 40 ಸಾವಿರ ಕೋಟಿ ಖೋತಾ ಆಗಲಿದೆ ಎಂದರು.
ಹೈಕಮಾಂಡ್ ಯಾವಾಗ ಸಚಿವ ಸಂಪುಟ ವಿಸ್ತರಣೆ ಮಾಡಿ ಎಂದು ಹೇಳುತ್ತಾರೋ ಆವಾಗ ಮಾಡ್ತೀವಿ ಎಂದು ಸಿಎಂ ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ: ಡಿಸಿಎಂ ಸವದಿ ಜೊತೆ ವಂಚಕ ಯುವರಾಜ್ : ಫೋಟೋ ವೈರಲ್