ಕೊಪ್ಪಳ: ಒಮ್ಮೆ ಮನೆಗೆ ಮೊಳೆ ಬಡಿದು ಸೊಸೆಯಾಗಿ ಬಂದ ನಂತರ ಆಕೆ ಮನೆ ಮಗಳಾಗುತ್ತಾಳೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಮೂಲ ಮತ್ತು ವಲಸಿಗರು ಎಂಬುದಕ್ಕೆ ಸೂಚ್ಯವಾಗಿ ಹೇಳಿದ್ದಾರೆ.
ನಗರದ ಪ್ರಸಿದ್ಧ ಗವಿಮಠಕ್ಕೆ ಭೇಟಿ ನೀಡಿದ ಅವರು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಗೆ ಬಂದ ಮೇಲೆ ನಾವು ಸಹ ಬಿಜೆಪಿಯವರು. ಮೂಲ ಮತ್ತು ವಲಸಿಗರ ಕುರಿತ ಹೇಳಿಕೆಗೆ ಈಗಾಗಲೇ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ನಾವು ಬಿಜೆಪಿಗೆ ಸುಮ್ಮನೆ ಬಂದಿಲ್ಲ. ಪಕ್ಷದ ಬಿ ಫಾರಂ ಪಡೆದು, ಜನಾದೇಶ ಪಡೆದು ಆಯ್ಕೆಯಾಗಿದ್ದೇವೆ. ಪಕ್ಷದ ಶಾಸಕರಾಗಿ ಹತಾಶೆಯಿಂದ ಆರೋಪ ಮಾಡುವುದು ಸರಿಯಲ್ಲ ಎಂದರು.
ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ:
ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಮಾಡುತ್ತಿರುವ ಆರೋಪ ಆಧಾರ ರಹಿತವಾದದ್ದು. ನೀರಾವರಿ ಇಲಾಖೆ ಕುರಿತಂತೆ ವಿಶ್ವನಾಥ್ ಅವರು ಮಾಡಿರುವ ಆರೋಪಕ್ಕೆ ಸಿಎಂ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು. ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡದಂತೆ ಸೂಚನೆ ಇದೆ. ಹೀಗಾಗಿ ಆ ಕುರಿತಂತೆ ನಾನು ಏನೂ ಮಾತನಾಡುವುದಿಲ್ಲ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ ಬೇರೆಯವರ ತಟ್ಟೆಯಲ್ಲಿನ ನೊಣದ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಗವಿಮಠಕ್ಕೆ ಭೇಟಿ:
ಮಾಧ್ಯಮದವರೊಂದಿಗೆ ಮಾತನಾಡುವ ಮೊದಲು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಶ್ರೀಗಳೊಂದಿಗೆ ಕೆಲ ವಿಷಯಗಳ ಕುರಿತು ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಸೋಂಕು ಹರಡುವಿಕೆಯ ಸ್ಥಿತಿಗತಿ, ರೋಗಿಗಳ ಚಿಕಿತ್ಸೆ, ಮುಂದಿನ ಮೂರನೇ ಅಲೆಯ ಕುರಿತು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಸಮಾಲೋಚನೆ ನಡೆಸಿದರು. ಅಲ್ಲದೇ ಈಗ ಮುಂಗಾರು ಮಳೆಯಾಗುತ್ತಿರುವ ಬಗ್ಗೆ, ಬಿತ್ತನೆ ಕುರಿತಂತೆಯೂ ಸಹ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ: ಬೆಳಗಾವಿ ಚಿನ್ನ ಕಳ್ಳತನ ಪ್ರಕರಣ: ಮೂರು ಕೇಸ್ ದಾಖಲು - ತನಿಖೆ ಚುರುಕು
ಆಕ್ಸಿಜನ್ ಉತ್ಪಾದನಾ ಘಟಕ, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ:
ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ ಆಕ್ಸಿಜನ್ ಉತ್ಪಾದನಾ ಪ್ಲಾಂಟ್ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಇಂದು ಚಾಲನೆ ನೀಡಿದರು. ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಗ್ರ ಕೃಷಿ ಅಭಿಯಾನದ 20 ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು. ಮಣ್ಣು, ಬೆಳೆ ಪದ್ಧತಿ, ಪೋಷಕಾಂಶದ ಮಾಹಿತಿಯ ಜಿಲ್ಲೆಯ ಹೋಬಳಿ ಗೆ ಒಂದರಂತೆ ಸಮಗ್ರ ಕೃಷಿ ಅಭಿಯಾನದ ವಾಹನಗಳಿಗೆ ಚಾಲನೆ ನೀಡಿದರು. ಅಲ್ಲದೇ ರೈತರಿಗೆ ತೊಗರಿಯ ಕಿರುಚೀಲಗಳನ್ನು ಇದೇ ಸಂದರ್ಭದಲ್ಲಿ ವಿತರಿಸಿದರು. ಶಾಸಕರು, ಸಂಸದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.