ಗಂಗಾವತಿ: ಕೊರೊನಾ ಹಿನ್ನೆಲೆ ಈಗಾಗಲೇ ಮಾರುಕಟ್ಟೆ ಸಿಗದೆ ರೈತರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿದ್ದು, ಬಾಳೆಯ ಗಿಡದಿಂದ ಗೊನೆಗಳನ್ನು ಬೇರ್ಪಡಿಸುವ ಕಾರ್ಯವನ್ನು ರೈತರು ಮಾಡುತ್ತಿರುವ ದೃಶ್ಯ ಕಂಡು ಬಂತು.
ತುಂಗಭದ್ರಾ ನದಿ ಪಾತ್ರದಲ್ಲಿ ಬರುವ ಹಲವು ಗ್ರಾಮಗಳಾದ ಆನೆಗೊಂದಿ, ಚಿಕ್ಕಜಂತಕ್ಕಲ್, ಬಸವನದುರ್ಗ, ಕಡೆಬಾಗಿಲು, ಹನುಮನಹಳ್ಳಿ, ರಾಂಪುರ, ಚಿಕ್ಕರಾಂಪುರ, ಮಲ್ಲಾಪುರ ಮೊದಲಾದ ಗ್ರಾಮಗಳಲ್ಲಿ ರೈತರು ಬಾಳೆ ಬೆಳೆಯುತ್ತಾರೆ. ಸುಗಂಧಿ ಬಾಳೆಗೆ ಆನೆಗೊಂದಿ ಪ್ರಸಿದ್ಧಿ ಪಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಾಳೆಗೆ ಹೆಚ್ಚಿನ ಬೇಡಿಕೆ ಕಾಣದ ಹಿನ್ನೆಲೆ ಬಹುತೇಕ ರೈತರು ಏಲಕ್ಕಿ ಬಾಳೆಯ ಮೊರೆ ಹೋಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಬಾಳೆ ಗಿಡಗಳು ನೆಲಕ್ಕುರುಳಿದ್ದನ್ನು ಕಂಡು ರೈತರು ಕಂಗಾಲಾಗಿದ್ದಾರೆ.