ಕೊಪ್ಪಳ: ತಾಲೂಕಿನಲ್ಲಿ ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗಂಗಾವತಿ ತಹಶೀಲ್ದಾರ್ ವೀರೇಶ್ ಬಿರಾದಾರ್ ತಿಳಿಸಿದ್ದಾರೆ.
ಈ ಟಿವಿ ಭಾರತದ ವರದಿ ಗಮನಿಸಿದ ತಹಶೀಲ್ದಾರ್, ವಿಶಿಷ್ಟ ಗುರುತಿನ ಚೀಟಿ ಆಯೋಗವು ನೀಡುತ್ತಿರುವ ಆಧಾರ್ ಕಾರ್ಡ್ನಲ್ಲಿನ ತಿದ್ದುಪಡಿಗೆ ಜನ ಪರದಾಡುತ್ತಿರುವ ಘಟನೆ ಗಮನಕ್ಕೆ ಬಂದಿದೆ. ಈಗಾಗಲೆ ನಗರದಲ್ಲಿ ನಾಲ್ಕು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಂದಾಯ ಇಲಾಖೆಯಲ್ಲಿ ಈ ಮೊದಲು ಒಂದು ಕೇಂದ್ರವಿತ್ತು. ಜನರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಕೇಂದ್ರ ಆರಂಭಿಸಲಾಗಿದೆ ಎಂದರು.
ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಪಿಜಿಬಿ ಬ್ಯಾಂಕ್ ಹಾಗೂ ಸಿಬಿಎಸ್ ವೃತ್ತದಲ್ಲಿನ ಐಸಿಐಸಿಐ ಬ್ಯಾಂಕಿಗೆ ಅಧಿಕೃತ ನೋಂದಣಿ ಅವಕಾಶ ನೀಡಲಾಗಿದೆ. ಅಲ್ಲಿ ದಿನಕ್ಕೆ ಕೇವಲ 20ರಿಂದ 25 ಟೋಕನ್ ಮಾತ್ರ ನೀಡುತ್ತಿರುವುದು ಜನರ ಸಮಸ್ಯೆ ಕಾರಣವಾಗಿದೆ ಎಂಬ ಅಂಶ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಹೆಚ್ಚುವರಿ ಕೇಂದ್ರ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಬಿರಾದಾರ್ ತಿಳಿಸಿದ್ದಾರೆ.