ಗಂಗಾವತಿ: ರೈತನೊಬ್ಬ ಕರ್ನಾಟಕ ಉಗ್ರಾಣ ನಿಗಮದ ಗೋದಾಮಿನಲ್ಲಿರಿಸಿದ್ದ 30 ಲಕ್ಷ ರೂಪಾಯಿ ಬೆಲೆ ಬಾಳುವ 3 ಸಾವಿರ ಭತ್ತದ ಚೀಲಗಳು ನಾಪತ್ತೆಯಾದ ಘಟನೆ ಕಾರಟಗಿಯಲ್ಲಿ ನಡೆದಿದೆ. ಇದೀಗ ಕಂಗಲಾಗಿರುವ ರೈತ ನಾಪತ್ತೆಯಾಗಿರುವ ತನ್ನ ಭತ್ತದ ಚೀಲಗಳನ್ನು ಹುಡುಕಿಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕಾರಟಗಿಯ ರೈತ ಚಂದ್ರಶೇಖರ ಸಿದ್ಧನಗೌಡ ಎಂಬುವರು ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರೈತನ ದೂರು ಸ್ವೀಕರಿಸಿಲು ಕಾರಟಗಿ ಪೊಲೀಸರು ನಿರಾಕರಿಸಿದ್ದರಿಂದ ರೈತ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರೈತ ನೀಡಿದ ದೂರಿನ ಮೇರೆಗೆ ಕರ್ನಾಟಕ ಉಗ್ರಾಣ ನಿಗಮದ ಕಾರಟಗಿ ಶಾಖೆಯ ವ್ಯವಸ್ಥಾಪಕ ಲಕ್ಷ್ಮಿಕಾಂತ ಹಾಗೂ ಸಹಾಯಕ ಅಧಿಕಾರಿ ರಾಕೇಶ್ ಎಂಬುವವರ ಮೇಲೆ ನಂಬಿಕೆದ್ರೋಹ, ವಂಚನೆ, ಅನಧಿಕೃತ ಕಳ್ಳತನ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕಾರಟಗಿಯ ಗೋದಾಮಿನಲ್ಲಿ ರೈತ ಚಂದ್ರಶೇಖರ 25-09-2017ರಂದು 1200 ಮೂಟೆ ಹಾಗೂ 23-07-2018ರಂದು 1800 ಮೂಟೆ ಭತ್ತದ ಚೀಲವನ್ನು ದಾಸ್ತಾನು ಮಾಡಿದ್ದಾರೆ. ಈ ಬಗ್ಗೆ ಉಗ್ರಾಣ ನಿಗಮದ ವ್ಯವಸ್ಥಾಪಕರಿಂದ ಅಧಿಕೃತ ರಶೀದಿ ಪಡೆದುಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಮಾರುವ ಉದ್ದೇಶಕ್ಕೆ ರೈತ ದಾಸ್ತಾನು ಇಟ್ಟಿದ್ದಾರೆ.
ಆದರೆ ಹಣದ ಕೊರತೆಯಿಂದಾಗಿ ದಾಸ್ತಾನು ಇಟ್ಟಿದ್ದ ಭತ್ತದ ಮೂಟೆಗಳ ಆಧಾರದ ಮೇಲೆ ಸಿಂಧನೂರಿನ ಕರ್ನಾಟಕ ಬ್ಯಾಂಕ್ನಲ್ಲಿ 12 ಲಕ್ಷ ಹಾಗೂ ವಿಜಯಾ ಬ್ಯಾಂಕ್ನಲ್ಲಿ 18 ಲಕ್ಷ ರೂ. ಸಾಲ ಮಾಡಿದ್ದಾರೆ. ಕೆಲ ದಿನಗಳ ಬಳಿಕ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಭತ್ತವನ್ನು ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸಲು ರೈತ ಮುಂದಾಗಿದ್ದಾರೆ. 16-09-2019ರಂದು ವ್ಯಕ್ತಿ ಗೋದಾಮಿಗೆ ಭೇಟಿ ನೀಡಿದಾಗ ವ್ಯವಸ್ಥಾಪಕ ಉದ್ದೇಶ ಪೂರ್ವಕವಾಗಿ ಗೈರು ಹಾಜರಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸತತವಾಗಿ ರೈತ ಅಲೆದಾಡಿದರೂ ಉಗ್ರಾಣ ಸಿಬ್ಬಂದಿಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದ್ದರಿಂದ ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗದ ಹಿನ್ನೆಲೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.