ಕೋಲಾರ: ಪ್ರೀತಿಸಿದ ಹುಡುಗಿ ತನಗೆ ಸಿಗಲಿಲ್ಲ ಎಂದು ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಅಂಜನಾದ್ರಿ ಲಾಡ್ಜ್ ಬಳಿ ನಡೆದಿದೆ.
ಡಾ. ದರ್ಶನ್ ಆತ್ಮಹತ್ಯೆ ಮಾಡಿಕೊಂಡಾತ. ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದವರಾದ ದರ್ಶನ್ ಕೋಲಾರ ಹಾಲು ಒಕ್ಕೂಟದಲ್ಲಿ ಪಶುವೈದ್ಯನಾಗಿ ಕೆಲಸ ಮಾಡುತ್ತಿದ್ದ. ಜೂನ್ 20ರಂದು ತಮ್ಮ ರೂಂ ಬಿಟ್ಟು ಹೊರ ಬಂದಿದ್ದ ದರ್ಶನ್, ಕೋಲಾರದ ಅಂಜನಾದ್ರಿ ಲಾಡ್ಜ್ನಲ್ಲಿ ಬಂದು ರೂಂ ಬುಕ್ ಮಾಡಿದ್ದನಂತೆ. ನಿನ್ನೆ ಸಂಜೆ ವೇಳೆಗೆ ನೇಣಿಗೆ ಶರಣಾಗಿದ್ದಾನೆ.
ಲಾಡ್ಜ್ ಮಾಲೀಕರ ಗಮನಕ್ಕೆ ವಿಷಯ ಬಂದ ಕೂಡಲೇ ಅವರು ಕೋಲಾರ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರ ಕುಟುಂಬಸ್ಥರು ನಾವು ಬರುವವರೆಗೆ ಶವ ಕೆಳಗಿಳಿಸದಂತೆ ಸೂಚಿಸಿದ್ದರು. ಹೀಗಾಗಿ ಇಂದು ಮುಂಜಾನೆ ವೇಳೆಗೆ ಅವರ ಕುಟುಂಬಸ್ಥರು ಬಂದ ನಂತರ ಶವ ಕೆಳಗಿಳಿಸಲಾಯಿತು. ಈ ವೇಳೆ ದರ್ಶನ್ ಬಳಿ ಡೆತ್ ನೋಟ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ ಎನ್ನಲಾಗಿದೆ.
ಒಂದೂವರೆ ವರ್ಷದ ಹಿಂದೆ ಕೋಚಿಮುಲ್ ಹಾಲು ಒಕ್ಕೂಟಕ್ಕೆ ಸಹಾಯಕ ವ್ಯವಸ್ಥಾಪಕನಾಗಿ ಸೇರಿದ್ದ ಡಾ. ದರ್ಶನ್, ಸೌಮ್ಯ ಸ್ವಾಭಾವದ ಹುಡುಗ ಎಂಬುದೇ ಎಲ್ಲರ ಅಭಿಪ್ರಾಯ. ಎಲ್ಲರ ಜೊತೆ ಓಡಾನಾಟ ಹೊಂದಿದ್ದ ದರ್ಶನ್, ಇದಕ್ಕೂ ಮೊದಲು ಬೆಳಗಾವಿ ಹಾಲು ಒಕ್ಕೂಟದಲ್ಲಿ ಕೆಲಸ ಮಾಡುತ್ತಿದ್ದ. ದರ್ಶನ್ ಕಳೆದ ಒಂದೂವರೆ ವರ್ಷದ ಹಿಂದೆ ಕೋಲಾರಕ್ಕೆ ಒಒಡಿ ಮೇಲೆ ಬಂದಿದ್ದ. ಕೋಲಾರ ಹೊರವಲಯದಲ್ಲಿರುವ ಗದ್ದೆಕಣ್ಣೂರಿನಲ್ಲಿ ಸ್ನೇಹಿತನ ಜೊತೆ ರೂಂ ಮಾಡಿಕೊಂಡಿದ್ದ.
ಕಾಲೇಜು ಸಮಯದಲ್ಲಿ ಮಂಡ್ಯ ಮೂಲದ ಯುವತಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದ ದರ್ಶನ್, ಸುಮಾರು ಎಂಟು ವರ್ಷಗಳ ಕಾಲ ಪ್ರೀತಿ ಮಾಡಿದ್ದಾನೆಂದು ತಿಳಿದು ಬಂದಿದೆ. ಇತ್ತೀಚೆಗೆ ಲವ್ ಬ್ರೇಕ್ ಅಪ್ ಆದ ಮೇಲೆ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ದರ್ಶನ್, ಶನಿವಾರ ರೂಂನಿಂದ ಹೊರ ಬಂದಿದ್ದಾನೆ. ಭಾನುವಾರ ಗ್ರಹಣವಿದೆ. ನಾನು ಸೋಮವಾರ ಬರುತ್ತೇನೆ ಎಂದು ರೂಂನ ಸ್ನೇಹಿತನಿಗೆ ಹೇಳಿ ಹೋದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಲಾಡ್ಜ್ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಊರಿಗೆ ಹೋಗಿ ಕಾಲ ಕಳೆದು ಬಂದಿದ್ದ ದರ್ಶನ್, ಲವ್ ಬ್ರೇಕಪ್ನಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪೋಷಕರಿಗೆ ಗರ ಬಡಿದಂತಾಗಿದೆ.
ಒಟ್ಟಾರೆ ಸುಂದರ ಬದುಕು ಕಟ್ಟಿಕೊಂಡು ಹೆತ್ತವರೊಂದಿಗೆ ನೆಮ್ಮದಿಯ ಸಂಸಾರ ಕಟ್ಟಿಕೊಂಡಿರಬೇಕಿದ್ದ ಯುವಕ, ಪ್ರೇಮ ಪಾಶಕ್ಕೆ ಬಿದ್ದು ಹೀಗೆ ಬದುಕಿಗೆ ತನ್ನ ಕೈಯಾರೆ ತಾನೇ ಅಂತ್ಯ ಹಾಡಿದ್ದು ಮಾತ್ರ ದುರಂತ.