ಕೋಲಾರ: ಒಂದೆಡೆ ದಿನ ಬಳಕೆ ವಸ್ತುಗಳು, ಪೆಟ್ರೋಲ್ - ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದ್ದು, ಇನ್ನೊಂದೆಡೆ ರೈತರಿಗೆ ಬೆಳೆಗಳ ಬೆಲೆ ಇಳಿಕೆ ಹೊಡೆತದಿಂದ ನಲುಗುತ್ತಿದ್ದಾರೆ. ಇದೀಗ ದೇವರ ಪೂಜೆಗೆ ಬಳಸುವ ಹೂವಿನ ಬೆಲೆ ಇಳಿಕೆಯಾಗಿ ಬೆಳೆಗಾರರು ಕಂಗಾಲಾಗಿದ್ದಾರೆ.
ಜಿಲ್ಲೆಯ ರೈತರು ಹಲವು ಬಗೆಯ ತರಕಾರಿ, ತೋಟಗಾರಿಕೆ ಬೆಳೆ ಬೆಳೆಯುವುದರ ಜೊತೆಗೆ ಹೂಗಳ ಕೃಷಿಯನ್ನು ಮಾಡುತ್ತಿದ್ದು, ಗುಲಾಬಿ, ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೀಗೆ ಹೂಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಅದರಂತೆ ಈ ಬಾರಿಯೂ ತಮ್ಮ ಜಮೀನುಗಳಲ್ಲಿ 20 ರಿಂದ 80 ಸಾವಿರ ಖರ್ಚು ಮಾಡಿ ಚೆಂಡು ಹೂವು ಬೆಳೆದಿದ್ದಾರೆ.
ಆದರೆ, ಹೂವಿಗೆ ಈಗ ಒಂದು ಕೆಜಿಗೆ ಒಂದು ರೂಪಾಯಿಗೂ ಖರೀದಿಸುವವರಿಲ್ಲದಂತಾಗಿದೆ. ಪಾತಾಳಕ್ಕಿಳಿದ ಬೆಲೆಯಿಂದಾಗಿ ಚೆಂಡು ಹೂವು ಬೆಳೆದ ಕೆಲ ರೈತರು ಗಿಡಗಳ ಸಮೇತ ರೋಟರ್ ಹೊಡೆಯುತ್ತಿದ್ದಾರೆ. ಇನ್ನು ಕೆಲವರು ಗಿಡದಿಂದ ಹೂವು ಕೀಳಲು ಕೂಲಿ ಕೊಡಲು ಹಣವಿಲ್ಲದೇ ಅಲ್ಲಿಯೇ ಬಿಟ್ಟು ಸುಮ್ಮನಾಗಿದ್ದಾರೆ.
ಹೂವು ಗಿಡದಿಂದ ಕಿತ್ತು ಅದನ್ನು ಪ್ಯಾಕ್ ಮಾಡಿಕೊಂಡು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಒಂದು ರೂ. ಬೆಲೆಗೂ ಕೇಳುವರಿಲ್ಲ. ಈ ರೀತಿಯ ಬೆಳೆಗಳಿಗೆ ಬೆಂಬಲ ಬೆಲೆ, ಸರಿಯಾದ ಬೆಲೆಯೂ ಇಲ್ಲದೇ ರೈತರು ದಿಕ್ಕು ತೋಚದಂತಾಗಿದ್ದಾರೆ.