ಕೋಲಾರ: ನಿನ್ನೆ(ಗುರುವಾರ) ಸಂಜೆ ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದಲ್ಲಿ ಯಶ್ವಿತ್ ಗೌಡ ಎಂಬ ಬಾಲಕನ ಅಪಹರಣವಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಕೇವಲ ಅರ್ಧ ಗಂಟೆಯಲ್ಲಿ ಅಪಹರಣಾಕಾರರನ್ನು ಬಂಧಿಸಿದ್ದಾರೆ. ಕೆಜಿಎಫ್ ತಾಲೂಕಿನ ಬೇತಮಂಗಲ ಮೂಲದ ವೆಂಕಟೇಶ್ ಹಾಗೂ ಅರಹಳ್ಳಿ ಗ್ರಾಮದ ಶ್ರೀಕಾಂತ್ ಬಂಧಿತ ಆರೋಪಿಗಳು. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಕರಣದ ಸಂಪೂರ್ಣ ವಿವರ: ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಲೋಕೇಶ್ ಎಂಬುವರ ಮಗ ಯಶ್ವಿತ್ ಗೌಡ (5) ನಿನ್ನೆ ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಅರಹಳ್ಳಿ ಗ್ರಾಮದ ಮನೆಯ ಬಳಿ ಪಲ್ಸರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಕೋಲಾರ ಜಿಲ್ಲಾ ಶ್ರೀನಿವಾಸಪುರ ಠಾಣಾ ಪೊಲೀಸರು ಸೋಮಯಾಜನಹಳ್ಳಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಲಕನ ತಂದೆ ಲೋಕೇಶ್ ಅವರಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿ ಹಾಗೂ ಎಕ್ಸಿಡ್ ಬ್ಯಾಟರಿ ಕಂಪನಿಯನ್ನು ಹೊಂದಿದ್ದಾರೆ. ಅಪಹರಣಕಾರರಿಗೆ ಮತ್ತೊಬ್ಬರು ಸುಪಾರಿ ನೀಡಿರುವ ಮಾಹಿತಿ ಇದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಶ್ರೀನಿವಾಸಪುರ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ
ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ವಿದ್ಯಾರ್ಥಿನಿಯ ಅಪಹರಣ ಯತ್ನ: ಪಿಎಸ್ಐ ಪ್ರತಿಕ್ರಿಯೆ ಹೀಗಿದೆ
11 ಕಡೆ ಕಳ್ಳತನ, ದರೋಡೆ- ಮಂಡ್ಯದಲ್ಲಿ ನಾಲ್ವರು ಆರೋಪಿಗಳ ಬಂಧನ: ಚಿನ್ನ, ಬೆಳ್ಳಿ, ವಾಹನಗಳಲ್ಲದೆ ಹಸು, ಎಮ್ಮೆ ಹಾಗೂ ಕುರಿಗಳನ್ನು ಕದಿಯುತ್ತಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಯದ ನಾಗಮಂಗಲ ತಾಲೂಕಿನ ಚಾಕೇನಹಳ್ಳಿಯ ರವಿಕುಮಾರ್, ಮಂಡ್ಯದ ಸೂನಗನಹಳ್ಳಿಯ ಮಂಜುನಾಥ್, ಹೇಮಂತ್ ಹಾಗೂ ವಿಷ್ಣು ಬಂಧಿತ ಆರೋಪಿಗಳು.
ಆರೋಪಿಗಳು ಕೆ.ಆರ್ ಪೇಟೆ, ಮಂಡ್ಯ, ಚನ್ನಪಟ್ಟಣ, ಬನ್ನೂರು ಸೇರಿದಂತೆ 11 ಕಡೆ ಕಳ್ಳತನ ಹಾಗೂ ದರೋಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರಿಂದ ಚಿನ್ನಾಭರಣ, ವಾಹನ, ಲ್ಯಾಪ್ ಟಾಪ್, ಎಮ್ಮೆ, ಕುರಿ, ಹಸು ಸೇರಿ ಒಟ್ಟು 35.86 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಸುಗಳ ಕಳ್ಳತನ: ಎಲ್ಲೆಲ್ಲಿ ಹಸುಗಳ ದೊಡ್ಡ ಫಾರಂ ಇದೆ ಎಂದು ತಿಳಿದುಕೊಂಡ ಆರೋಪಿಗಳು ಒಂದೊಂದು ಫಾರಂನಲ್ಲಿ ಎರಡೆರಡು ಹಸುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಹಸುಗಳು ಕಳ್ಳತನವಾದ ಬಗ್ಗೆ ಚನ್ನಪಟ್ಟಣ, ಕೆ.ಆರ್ ಪೇಟೆ, ಚನ್ನರಾಯಪಟ್ಟಣ ಹಾಗೂ ಬನ್ನೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್ ಪೇಟೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಯ ಪೈಕಿ ರವಿಕುಮಾರ್ ಒಂದು ಫಾರಂ ನಿರ್ಮಾಣ ಮಾಡಿಕೊಂಡಿದ್ದು, ತಾನು ಹಸು ಸಾಕಾಣಿಕೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದನಂತೆ. ಅಲ್ಲದೇ ಕದ್ದ ಹಸುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದನಂತೆ. ಗ್ರಾಮಸ್ಥರು ಇದನ್ನು ನಂಬಿದ್ದರು. ಈತನಿಗೆ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ್ ಸಹಕರಿಸಿದ್ದ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಮಷಿನ್‌ನಲ್ಲಿ ಕರಗಿಸಿ ಇಟ್ಟಿದ್ದ 61.8 ಲಕ್ಷ ಮೌಲ್ಯದ ಆಭರಣಗಳ ಲಿಕ್ವಿಡ್ ಕಳುವು ಪ್ರಕರಣ: ನಾಲ್ವರ ಬಂಧನ