ಕೊಡಗು: ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಕೇವಲ 16 ದಿನದಲ್ಲಿ ಹುಲಿ ಮೂವರನ್ನು ಬಲಿ ಪಡೆದಲ್ಲದೇ 12 ಹಸುಗಳನ್ನು ತಿಂದು ಹಾಕಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಎದುರೇ ಹುಲಿಯೊಂದು ಇಬ್ಬರ ಮೇಲೆ ದಾಳಿ ನಡೆಸಿದೆ. ಅಜ್ಜ ಮತ್ತು ಮೊಮ್ಮಗ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಘಟನೆಯಲ್ಲಿ 8 ವರ್ಷದ ಮೊಮ್ಮಗ ರಂಗಸ್ವಾಮಿಯನ್ನು ತಿಂದು ಹಾಕಿದೆ.
ಈ ದಾಳಿಯಲ್ಲಿ ಅಜ್ಜ ಕೆಂಚ (52) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಹುಲಿಯೊಂದು 3 ನೇ ಬಲಿ ಪಡೆದಿದ್ದರಿಂದ ಗ್ರಾಮದಲ್ಲಿ ಈಗ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಬೆಳ್ಳೂರು ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶಗೊಂಡು ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು.
ಗೋಣಿಕೊಪ್ಪಲು - ಕೇರಳದ ಅಂತಾರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುತ್ತಿದ್ದ ಗ್ರಾಮಸ್ಥರು ಹಂತಕ ಹುಲಿಗೆ ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿದರು. 15 ದಿನಗಳಿಂದ 150 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು 4 ಸಾಕಾನೆಗಳಿಂದ ಶೋಧ ಕಾರ್ಯ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತಿಭಟನೆ ವಿಕೋಪಕ್ಕೆ ತಿರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹುದಿಕೇರಿ ಹೋಬಳಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ವಿರಾಜಪೇಟೆ ತಹಶೀಲ್ದಾರ್ ಆದೇಶಿದ್ದಾರೆ.